ಹೈದ್ರಾಬಾದ್: ಆನ್ ಲೈನ್ ಲೋನ್ ಆಪ್ ಗಳ ಕಿರುಕುಳಕ್ಕೆ ಬೇಸತ್ತು ಪ್ರಾಣ ಕಳೆದುಕೊಳ್ಳುವವರ ಸುದ್ದಿಗಳು ಅಲ್ಲೊಂದು ಇಲ್ಲೊಂದು ವರದಿಯಾಗುತ್ತಲೇ ಇರುತ್ತವೆ. ಇದಕ್ಕೊಂದು ಹೊಸ ಸೇರ್ಪಡೆಯೆಂಬಂತೆ, ಲೋನ್ ಆಪ್ ಗಳ ಕಿರುಕುಳಕ್ಕೆ ಬೇಸತ್ತು ನವ ವಿವಾಹಿತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದುರಂತ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಿಂದ ವರದಿಯಾಗಿದೆ.

ದುರಂತವೆಂದರೆ, ಆನ್ ಲೈನ್ ಲೋನ್ ಆಪ್ ನವರು ಕೇವಲ 2 ಸಾವಿರ ಬಾಕಿ ಮೊತ್ತಕ್ಕೆ 22 ವರ್ಷ ಪ್ರಾಯದ ನರೇಂದ್ರ ಎಂಬ ಈ ವ್ಯಕ್ತಿಗೆ ನೀಡಿರುವ ಕಿರುಕುಳಕ್ಕೆ ಬೇಸತ್ತು ಈ ನವವಿವಾಹಿತ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿಯಂತೆ, ವೃತ್ತಿಯಲ್ಲಿ ಮೀನುಗಾರನಾಗಿರುವ ನರೇಂದ್ರ ಎಂಬ ವ್ಯಕ್ತಿ ಪ್ರತಿಕೂಲ ಹವಾಮಾನದ ಕಾರಣದಿಂದ ಕಳೆದ ಕೆಲವು ತಿಂಗಳುಗಳಿಂದ ಮೀನುಗಾರಿಕೆಗೆ ಹೋಗಲಾಗದೆ ಮನೆಯಲ್ಲೇ ಇದ್ದರು. ಈ ಸಂದರ್ಭದಲ್ಲಿ ಅವರು ಇನ್ಸ್ಟಂಟ್ ಲೋನ್ ಆಪ್ ಮೂಲಕ ಎರಡು ಸಾವಿರ ರೂಪಾಯಿ ಸಾಲ ಪಡೆದುಕೊಳ್ಳಲು ನಿರ್ಧರಿಸಿ, ಸಾಲವನ್ನು ತೆಗೆದುಕೊಂಡಿದ್ದರು. ನರೇಂದ್ರ ಅವರು ತಾವು ಪಡೆದುಕೊಂಡಿದ್ದ ಎರಡು ಸಾವಿರ ರೂಪಾಯಿಗಳನ್ನು ಹಿಂಪಾವತಿ ಮಾಡಿದ್ದರೂ, ಸಾಲ ನೀಡಿದ ಸಂಸ್ಥೆಯ ಕೆಲ ವ್ಯಕ್ತಿಗಳು ಬಡ್ಡಿಯ ರೂಪದಲ್ಲಿ ದೊಡ್ಡ ಮೊತ್ತವನ್ನು ನೀಡುವಂತೆ ನರೇಂದ್ರ ಅವರಿಗೆ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.

ಆದರೆ, ಅಷ್ಟೊಂದು ದೊಡ್ಡ ಮೊತ್ತವನ್ನು ತನಗೆ ಪಾವತಿಸಲು ಸಾಧ್ಯವಿಲ್ಲ ಎಂದು ನರೇಂದ್ರ ಹೇಳಿದಾಗ ಸಾಲ ನೀಡಿದವರು ಆತನನ್ನು ಕೆಟ್ಟದಾಗಿ ನಿಂದಿಸಿ ಕಿರುಕುಳ ನೀಡಿದ್ದಾರೆಂಬ ಆರೋಪ ವ್ಯಕ್ತವಾಗಿದೆ. ಇನ್ನು, ನರೇಂದ್ರ ಅವರು ಅ.20ರಂದು ವಿವಾಹವಾಗಿದ್ದರು. ಲೋನ್ ಆಪ್ ನವರು ನರೇಂದ್ರ ಮತ್ತು ಅವರ ಪತ್ನಿಯನ್ನೂ ಸಹ, ಮಾರ್ಫ್ ಮಾಡಲಾದ ನಗ್ನ ಫೊಟೋವನ್ನು ವಾಟ್ಸ್ಯಾಪ್ ನಲ್ಲಿ ಅವರ ಗೆಳೆಯರ ಬಳಗದಲ್ಲಿ ಕಳುಹಿಸುವ ಮೂಲಕ ಬ್ಲ್ಯಾಕ್ ಮೇಲ್ ಮಾಡಲು ಪಾರಂಭಿಸಿದ್ದರು.

ತನಗೆ ಆಗುತ್ತಿರುವ ಕಿರುಕುಳದ ಬಗ್ಗೆ ಯಾರೊಂದಿಗೂ ಹೇಳಿಕೊಳ್ಳಲಾಗ ನರೇಂದ್ರ ಖಿನ್ನತೆಗೆ ಒಳಗಾಗಿದ್ದ ನರೇಂದ್ರ ಕೊನೆಗೂ ಡಿ.7ರಂದು ನೇಣಿಗೆ ಶರಣಾಗಿದ್ದಾನೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.

ಲಭ್ಯ ಮಾಹಿತಿ ಪ್ರಕಾರ, ಲೋನ್ ಆಪ್ ನ ಎಕ್ಸಿಕ್ಯೂಟಿವ್ ನರೇಂದ್ರ ಅವರ ಫೋನನ್ನು ಹ್ಯಾಕ್ ಮಾಡಿ ಅಲ್ಲಿಂದ ಈತ ಮತ್ತು ಈತನ ಪತ್ನಿಯ ಫೊಟೋವನ್ನು ಪಡೆದುಕೊಂಡು ಅದನ್ನು ಮಾರ್ಫ್ ಮಾಡಿ ಈ ನಗ್ನ ಸ್ವರೂಪದ ಫೊಟೋಗಳನ್ನು ವಾಟ್ಸ್ಯಾಪ್ ಮೂಲಕ ಇವರ ಬಳಗದಲ್ಲೆಲ್ಲಾ ಹರಿಬಿಟ್ಟಿದ್ದಾರೆಂದು ತಿಳಿದುಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಂದ್ರ ಅವರ ಕುಟುಂಬದವರು ಪೊಲಿಸ್ ಕಮಿಷನರ್ ಹಾಗೂ ಜಿಲ್ಲಾಧಿಕಾರಿಯವರಿಗೆ ದೂರು ಸಲ್ಲಿಸಿದ್ದಾರೆ. ಇದೀಗ ಪೊಲೀಸರು ಭಾರತಿಯ ನ್ಯಾಯ ಸಂಹಿತೆಯ ಸೆಕ್ಷನ್ 108 ಹಾಗೂ ಸಂಬಂಧಿತ ಐಟಿ ಕಾಯ್ದೆಗಳಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.

ಮುಂದಿನ ತನಿಖೆಗಾಗಿ, ಸಂತ್ರಸ್ತ ನರೇಂದ್ರನ ಮೊಬೈಲ್ ಫೋನನ್ನು ಸೈಬರ್ ಫಾರೆನ್ಸಿಕ್ ಪರಿಶೀಲನೆಗಾಗಿ ಪಡೆದುಕೊಳ್ಳಲಾಗಿದೆ ಮತ್ತು ನಗರ ಪೊಲೀಸ್ ನ ಸೈಬರ್ ಕ್ರೈಂ ವಿಭಾಗದವರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಅಸಿಸ್ಟೆಂಟ್ ಪೊಲೀಸ್ ಕಮಿಷನರ್ (ಪೂರ್ವ ವಿಭಾಗ) ಕೆ ಲಕ್ಷ್ಮಣ ಮೂರ್ತಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!