
ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 234ರ ಗ್ರಾಮಾಂತರ ಪೊಲೀಸ್ ಠಾಣೆ ಸಮೀಪ ಗುರುವಾರ ರಸ್ತೆಬದಿ ನಿಂತಿದ್ದ ಲಾರಿಗೆ ವೇಗವಾಗಿ ಬಂದ ಕ್ಯಾಂಟರ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇದರಿಂದ ಎರಡೂ ವಾಹನಗಳು ಜಖಂಗೊಂಡಿದ್ದು, ಕ್ಯಾಂಟರ್ ಚಾಲಕನಿಗೆ ಗಾಯವಾಗಿದೆ
ಆಲೂಗಡ್ಡೆ ತುಂಬಿಸಿಕೊಂಡು ಆಗ್ರಾದಿಂದ ನಗರದ ಎಪಿಎಂಸಿಗೆ ಬರುತ್ತಿದ್ದ ಲಾರಿ ಬೆಳಗಿನ ಜಾವ ಸುಮಾರು 4 ಗಂಟೆ ವೇಳೆಗೆ ಚಾಲಕ ರಸ್ತೆ ಬದಿ ಲಾರಿ ನಿಲ್ಲಿಸಿ ಶೌಚಕ್ಕೆ ಹೋಗಿದ್ದ. ಅದೇ ಸಮಯದಲ್ಲಿ ತುಮಕೂರಿನಿಂದ ಕೋಳಿ ಫೀಡ್ ತುಂಬಿಸಿಕೊಂಡು ಕೋಲಾರ ಜಿಲ್ಲೆಯ ಮುಳಬಾಗಿಲು ಕಡೆಗೆ ಹೋಗುತ್ತಿದ್ದ ಕ್ಯಾಂಟರ್ ರಸ್ತೆ ಎಡಬದಿ ನಿಲ್ಲಿಸಿದ್ದ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.
ಕ್ಯಾಂಟರ್ ಚಾಲಕನ ಅತಿವೇಗ ಮತ್ತು ಅಜಾಗರೂಕ ಚಾಲನೆಯೇ ದುರ್ಘಟನೆಗೆ ಕಾರಣ ಎಂಬುದು ಪ್ರಾಥಮಿಕ ವರದಿಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಯಾಂಟರ್ ಡಿಕ್ಕಿಯ ರಭಸಕ್ಕೆ ಲಾರಿ ರಸ್ತೆಬದಿಯಿಂದ ಪಕ್ಕದ ಹಳ್ಳಕ್ಕೆ ಜಾರಿದೆ. ಲಾರಿಯ ಹಿಂಭಾಗದ ಬಲಭಾಗ ಸಂಪೂರ್ಣ ಜಖಂಗೊಂಡಿದೆ. ಕ್ಯಾಂಟರ್ ವಾಹನದ ಮುಂಭಾಗ ಜಖಂಗೊಂಡಿದ್ದು, ಅದೃಷ್ಟಾವಶಾತ್ ಚಾಲಕ ಸಾಧಿಕ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ವಿಷಯ ಗೊತ್ತಾದ ಕೂಡಲೇ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.






