
ಪುತ್ತೂರು: ನೂರೇ ಅಜ್ಮೀರ್ ೪ನೇ ವಾರ್ಷಿಕ ಸಂಗಮ `ಆಧ್ಯಾತ್ಮಿಕ ಮಜ್ಜಿಸ್’, ಕವಿಗೋಷ್ಠಿ ಹಾಗೂ `ಮಾದಕತೆ ಮಾರಣಾಂತಿಕ’ ಅಧ್ಯಯನಾತ್ಮಕ ಪುಸ್ತಕ ಬಿಡುಗಡೆ ಸಮಾರಂಭ ಡಿ.೨೬ರಂದು ಪುತ್ತೂರು ಸುದಾನ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಪುಸ್ತಕದ ಕೃತಿಕಾರ ಹಾಗೂ ಕಾರ್ಯಕ್ರಮದ ಸಂಯೋಜಕ ಇಕ್ಬಾಲ್ ಬಾಳಿಲ ತಿಳಿಸಿದ್ದಾರೆ.
ಅವರು ಸೋಮವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈಗಾಗಲೇ ಯು ಟ್ಯೂಬ್‌ಗಳಲ್ಲಿ ಬೆಳಗ್ಗಿನ ಜಾವ ಲೈವ್ ಆಗಿ ಪ್ರಸಾರವಾಗುತ್ತಿರುವ ಆಧ್ಯಾತ್ಮಿಕ ನೂರೇ ಅಜ್ಮೀರ್‌ನ ೪ನೇ ವಾರ್ಷಿಕವನ್ನು ಪುತ್ತೂರಿನಲ್ಲಿ ನಡೆಸಲಾಗುತ್ತಿದ್ದು, ಸುಮಾರು ೨೫ ಸಾವಿರ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸಂಜೆ ಪುಸ್ತಕ ಬಿಡುಗಡೆ ಮತ್ತು ರಾಜ್ಯಮಟ್ಟದ ಬಹು ಬಾಷಾ ಕವಿಗೋಷ್ಠಿ ನಡೆಯಲಿದೆ. ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ ಆಂಜನೇಯ ರೆಡ್ಡಿ ಮುಖ್ಯ ಭಾಷಣ ಮಾಡಲಿದ್ದಾರೆ. ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಬೆಂಗಳೂರಿನ ಉದ್ಯಮಿ ವೆಂಕಟೇಶ್, ಹಿಂದುಸ್ಥಾನ್ ಗೋಲ್ಡ್ ಕಂಪನಿ ಸ್ಥಾಪಕ ಸಿ.ಕೆ.ಮೌಲಾ ಶರೀಫ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ರಾತ್ರಿ ನಡೆಯುವ ನೂರೇ ಅಶ್ಮೀರ್ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಅಶ್ರಫ್ ಷಾ ಮಾಂತೂರು ಅಧ್ಯಕ್ಷತೆ ವಹಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಪುತ್ತೂರು ತಂಜಳ್ ದುಆ ನೇತೃತ್ವ ವಹಿಸಲಿದ್ದು, ಝೈನುಲ್ ಅಬಿದೀನ್ ತಂಜಳ್, ಸಮಸ್ತ ಮುಕಶಾವರ ಸದಸ್ಯ ಬಂಬ್ರಾಣ ಉಸ್ತಾದ್, ಉಸ್ಮಾನುಲ್ ಫೈಝಿ ತೋಡಾರ್, ಶಾಸಕ ಅಶೋಕ್ ಕುಮಾರ್ ರೈ, ಸ್ಪೀಕರ್ ಯು. ಟಿ. ಖಾದರ್ ಭಾಗವಹಿಸಲಿದ್ದಾರೆ.
ಮಾದಕತೆ ಮಾರಣಾಂತಿಕ ಎಂಬ ಪುಸ್ತಕ ಬರೆಯುವಲ್ಲಿ ನಾನು ದೇಶದ ವಿವಿಧ ಕಡೆ ಸಂಚರಿಸಿದ್ದೇನೆ. ಬಹುತೇಕವಾಗಿ ದೇಶದಲ್ಲಿ ಬಹು ಹೆಚ್ಚು ಮಾದಕತೆ ಇರುವುದು ಪಂಜಾಬಿನಲ್ಲಿ. ಅಲ್ಲಿ ಒಂದು ವಾರ ಸಮೀಕ್ಷೆ ನಡೆಸಿ ಪುಸ್ತಕ ಬರೆದಿದ್ದೇನೆ. ೩೦೦ ಪುಟಗಳ ಪುಸ್ತಕದಲ್ಲಿ ೩೫ ಭಾಗವಿದೆ. ಮುಂದೆ ದಕ್ಷಿಣ ಕನ್ನಡ ಪಂಜಾಬ್ ಆಗದಿರಲಿ ಎಂದು ನಾನು ಪುಸ್ತಕ ಬರೆದಿದ್ದೇನೆ. ಮಾದಕತೆಯಲ್ಲಿ ಕಾಣದ ಕೈಗಳು ಇವೆ. ಅದೆಲ್ಲವನ್ನು ಪುಸ್ತಕದಲ್ಲಿ ಬರೆದಿದ್ದೇನೆ. ಈ ಕುರಿತು ಎಲ್ಲೆಡೆ ಜಾಗೃತಿಯ ಅಗತ್ಯವಿz. ಅದನ್ನು ನಿಲ್ಲಿಸುವ ಉದ್ದೇಶದಿಂದ ಪುಸ್ತಕವನ್ನು ಸಮಾಜಕ್ಕೆ ಅರ್ಪಿಸುತ್ತಿದ್ದೇವೆ ಎಂದು ಇಕ್ಬಾಲ್ ಬಾಳಿಲ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ನೂರೇ ಅಶ್ಮೀರ್ ಕಾರ್ಯಕ್ರಮದ ಸಂಚಾಲಕ ಎಲ್.ಟಿ.ರಝಾಕ್ ಹಾಜಿ, ನಿರ್ದೇಶಕ,ಮುಕ್ವೆ ಜುಮಾ ಮಸೀದಿಯ ಖತಿಬ್ ಇರ್ಷಾದ್ ಫೈಝಿ, ಸದಸ್ಯರಾದ ಮೋನು ಬಪ್ಪಳಿಗೆ, ಬಶೀರ್ ಪುತ್ತೂರು ಉಪಸ್ಥಿತರಿದ್ದರು.






