ಪುತ್ತೂರು, ಜೂ. 7: ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ (ಪುತ್ತೂರು ತಾಲೂಕು ಮತ್ತು ಗ್ರಾಮಾಂತರ) ಹಾಗೂ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ, ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ ಕೇಂದ್ರಗಳ ಸಹಯೋಗದೊಂದಿಗೆ ಸಾಮೂಹಿಕ ಸರಸ್ವತಿ ವಂದನೆ ಮತ್ತು ವಿದ್ಯಾ ಸಂಕಲ್ಪ ಕಾರ್ಯಕ್ರಮವು ಶನಿವಾರ ದೇವಸ್ಥಾನದ ವಠಾರದಲ್ಲಿ ಭಕ್ತಿಭಾವದಿಂದ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಹಾಗೂ ಕೇಶವಪ್ರಸಾದ್ ಮುಳಿಯ ಹವನದ ಸಂಕಲ್ಪ ನೆರವೇರಿಸಿದರು. ಜಯರಾಮ ಜೋಯಿಸ್ ಮತ್ತು ತಂಡವು ಸರಸ್ವತಿ ಸೂಕ್ತ ಹವನ ನಡೆಸಿಕೊಟ್ಟರು.
ದೇವಾಲಯ ಸಂವರ್ಧನಾ ಸಮಿತಿಯ ಮಂಗಳೂರು ವಿಭಾಗ ಪ್ರಮುಖರಾದ ಕೇಶವಪ್ರಸಾದ್ ಮುಳಿಯ ಅವರು ವಿದ್ಯಾರ್ಥಿಗಳಿಗೆ ಹೊಸ ಶೈಕ್ಷಣಿಕ ವರ್ಷದ ಪ್ರತಿಜ್ಞಾಪೂರ್ವಕ ವಿದ್ಯಾ ಸಂಕಲ್ಪ ಬೋಧಿಸಿದರು. ಪೂರ್ಣಾಹುತಿ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಷ್ ರೈ ಬೆಳ್ಳಿಪ್ಪಾಡಿ, ಸಮಿತಿಯ ಪ್ರಮುಖರಾದ ರವೀಂದ್ರನಾಥ್ ರೈ, ರಾಮ್‌ದಾಸ್ ಗೌಡ, ರಾಧಾಕೃಷ್ಣ ನಂದಿಲ, ಕೃಷ್ಣಕುಮಾರ್ ಅತ್ರಿಜಾಲು, ಸಂಪತ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 175 ವಿದ್ಯಾರ್ಥಿಗಳು ಭಕ್ತಿಪೂರ್ವಕ ಭಜನೆ, ಸರಸ್ವತಿ ಅಷ್ಟೋತ್ತರ ಪಠಣ ಹಾಗೂ ಪುಸ್ತಕಗಳಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಮಂಜುಳಗಿರಿ ವೆಂಕಟರಮಣ ಭಟ್ ಅವರು ವಿದ್ಯಾರ್ಥಿಗಳಿಗೆ ಸರಸ್ವತಿ ಅಷ್ಟೋತ್ತರ ಮತ್ತು ಶ್ಲೋಕಗಳನ್ನು ಬೋಧಿಸಿದರು. ವಿದ್ಯಾರ್ಥಿಗಳು, ಬೋಧಕರು, ಪೋಷಕರು ಹಾಗೂ ಭಕ್ತರು ಸೇರಿದಂತೆ ಸುಮಾರು 275 ಮಂದಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದ ಆಸಕ್ತಿ, ಸಂಸ್ಕಾರ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಸಾದ ಪುಸ್ತಕ ಹಾಗೂ ದೇವರ ನಾಮಾಂಕಿತ ಪೆನ್ನುಗಳನ್ನು ವಿತರಿಸಲಾಯಿತು.
ಅಧಿಕಮಾಸದ ಸಂದರ್ಭದಲ್ಲಿ ನಡೆದ ಈ ಕಾರ್ಯಕ್ರಮವು ವಿದ್ಯೆ, ಭಕ್ತಿ ಮತ್ತು ಸಂಸ್ಕಾರದ ಸಂಗಮವಾಗಿ ವಿಶೇಷ ಮಹತ್ವ ಪಡೆದಿದ್ದು, ಎಲ್ಲರಿಗೂ ಅಧಿಕ ಫಲಪ್ರದವಾಗಲಿ ಎಂದು ಆಯೋಜಕರು ಪ್ರಾರ್ಥಿಸಿದರು.
ಪ್ರಸ್ತುತ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು, ಶ್ರೀ ಮುಂಡ್ಯತ್ತಾಯ ದೈವಸ್ಥಾನ ಪಾಂಗಳಾಯಿ, ಮುಳಿಯ ದೇವರಕಟ್ಟೆ, ಅಟಲ್ ಉದ್ಯಾನ ಕೊಂಬೆಟ್ಟು, ಮಾಸ್ಟರ್ ಪ್ಲಾನರಿ ಕಲ್ಲೇಗ, ಶ್ರೀ ಷಣ್ಮುಖ ಸುಬ್ರಹ್ಮಣ್ಯ-ಶ್ರೀ ಮಹಾವಿಷ್ಣು ದೇವಸ್ಥಾನ ಕೆಮ್ಮಿಂಜೆ ಹಾಗೂ ಶ್ರೀ ರಾಘವೇಂದ್ರ ಮಠ ಕಲ್ಲಾರೆ ಕೇಂದ್ರಗಳಲ್ಲಿ ಹಿಂದೂ ಧಾರ್ಮಿಕ ಶಿಕ್ಷಣ ತರಗತಿಗಳು ನಡೆಯುತ್ತಿವೆ ಎಂದು ತಿಳಿಸಲಾಗಿದೆ.







