
ಮಂಗಳೂರು, ಡಿಸೆಂಬರ್ 25: ನಕಲಿ ಚಿನ್ನ (fake gold) ಅಡವಿಟ್ಟು ವ್ಯಕ್ತಿ ಓರ್ವ ರೂ. 2 ಕೋಟಿಗೂ ಅಧಿಕ ಸಾಲವನ್ನು ಪಡೆದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿರುವ ಸಮಾಜ ಸೇವಾ ಸಹಕಾರಿ ಸಂಘಕ್ಕೆ ವಂಚಿಸಿರುವ ಆರೋಪ ಕೇಳಿಬಂದಿತ್ತು. ಆದರೆ, ಬ್ಯಾಂಕ್ನ ಪ್ರಧಾನ ಕಚೇರಿಯಿಂದ ಪ್ರಕರಣದ ಕುರಿತಾಗಿ ಸಮಜಾಯಿಷಿ ಸಂದೇಶ ನೀಡಿದ್ದು, ಸಮಾಜ ಸೇವಾ ಸಹಕಾರಿ ಸಂಘವು ಉತ್ತಮ ಲಾಭದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇದನ್ನು ಸಹಿಸಲಾಗದ ಕೆಲವರು ಸಂಘ, ಸಂಘದ ಆಡಳಿತ ಮಂಡಳಿಯ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.
ಮಾಧ್ಯಮಗಳಿಗೆ ಪತ್ರದ ಮೂಲಕ ಸಮಜಾಯಿಷಿಯ ಸಂದೇಶ ಕಳುಹಿಸಿರುವ ಬ್ಯಾಂಕ್, ನಮ್ಮ ಸಂಘದಲ್ಲಿ ಇಂತಹ ಒಂದು ಘಟನೆ ಆಗಿದೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಘಟನೆ ಬಗ್ಗೆ ನಾವು ಕಾನೂನು ರೀತಿಯಲ್ಲಿ ಎಲ್ಲಾ ಕ್ರಮಕೈಗೊಂಡಿದ್ದೇವೆ. ಯಾರ ಮೇಲೆ ಶಿಸ್ತು ಕ್ರಮಕೈಗೊಳ್ಳಬೇಕು ಅದನ್ನು ಕೂಡ ನಮ್ಮ ಸಂಘದ ಆಡಳಿತ ಮಂಡಳಿಯ ಸಭೆ ಕರೆದು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಮುಂದೆ ನಡೆಯುವ ಚುನಾವಣೆಯ ದೃಷ್ಟಿಯಿಂದ ಇಂತಹ ಕೃತ್ಯಗಳನ್ನು ಮಾಡಲಾಗುತ್ತಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಮಗೆ ಪೊಲೀಸರ ಮೇಲೆ ಮತ್ತು ನ್ಯಾಯಾಲಯದ ಮೇಲೆ ಗೌರವ, ನಂಬಿಕೆ ಇದೆ ಎಂದಿದ್ದಾರೆ.
ಪುತ್ತೂರು ತಾಲೂಕಿನ ಈಶ್ವರಮಂಗಲದ ಅಬೂಬಕ್ಕರ್ ಸಿದ್ದಿಕ್ ಎಂಬಾತ ನಕಲಿ ಚಿನ್ನ ಅಡವಿಟ್ಟು 2 ಕೋಟಿ 11 ಲಕ್ಷದ 89 ಸಾವಿರದ 800 ರೂ ಸಾಲ ನೀಡಿದ್ದ ವ್ಯಕ್ತಿ. ಚಿನ್ನ ಪರೀಕ್ಷೆ ನಡೆಸುವ ಸರಫ, ಬ್ಯಾಂಕ್ನ ಅಧ್ಯಕ್ಷ, ಜನರಲ್ ಮ್ಯಾನೇಜರ್, ನಿರ್ದೇಶಕರು, ಬ್ಯಾಂಕ್ ಸಿಬ್ಬಂದಿಗಳ ಸಹಕಾರದಿಂದಲೇ ಈ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ.
ಸದ್ಯ ಈ ಬಗ್ಗೆ ಬ್ಯಾಂಕ್ನ ಸದಸ್ಯರು, ಮಾಜಿ ನಿರ್ದೇಶಕರಿಂದ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟು 28 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆಗೆ ಇಳಿದಿದ್ದಾರೆ.






