
ಪುತ್ತೂರು: ನಿಯಂತ್ರಣ ತಪ್ಪಿದ ಕಾರೊಂದು ಇಲ್ಲಿನ ಬೈಪಾಸ್ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ತಂದೆ ಮತ್ತು ಮಗ ಸೇರಿ ಮೂವರು ಮೃತಪಟ್ಟಿದ್ದಾರೆ.
ಸುಳ್ಯ, ಜಟ್ಟಿಪಳ್ಳದ ಕಾನತ್ತಿಲ ನಿವಾಸಿ ಅಣ್ಣು ನಾಯ್ಕ ಮತ್ತು ಅವರ ಪುತ್ರ ಚಿಕ್ಕಮಗಳೂರು ಜಿಲ್ಲೆಯ ಕಾರ್ಮಿಕ ಇಲಾಖೆಯ ಅಧಿಕಾರಿ ಚಿದಾನಂದ ನಾಯ್ಕ ಮತ್ತು ಸಂಬಂಧಿ ರಮೇಶ್ ನಾಯ್ಕ್ ಮೃತಪಟ್ಟವರು ಎಂದು ಗೊತ್ತಾಗಿದೆ.
ಗೊಂದೊಳು ಪೂಜೆ ಸಲುವಾಗಿ ಅವರು ಶುಕ್ರವಾರ ರಾತ್ರಿ ವಿಟ್ಲ ಸಮೀಪದ ಪುಣಚಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಶನಿವಾರ ಅಲ್ಲಿಂದ ಮರಳುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿತ್ತು.
ಪುಣಚ ಬುಳೇರಿಕಟ್ಟೆಯಿಂದ ಹೊರಟ ಕಾರು ಒಳ ರಸ್ತೆಯಲ್ಲಿ ಸಾಗಿ ಪುತ್ತೂರು ಬೈಪಾಸ್ ಬಳಿ ಹೆದ್ದಾರಿಯನ್ನು ಸೇರುವ ಜಾಗದಲ್ಲಿ ಈ ಅಪಘಾತ ಸಂಭವಿಸಿದೆ. ಚಾಲಕ ನಿದ್ದೆ ಮಂಪರಿನಲ್ಲಿ ಇದ್ದುದರಿಂದ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.






