ಪುತ್ತೂರು: ಒಕ್ಕಲಿಗ ಸ್ವಸಹಾಯ ಟ್ರಸ್ಟ್ನ ದಶಸಂಭ್ರಮದ ಸವಿನೆಪಿಗಾಗಿ ನೆಲ್ಲಿಕಟ್ಟೆ ಖಾಸಗಿ ಬಸ್ನಿಲ್ದಾಣ ಸಮೀಪದ ಸ್ವಂತ ಕಟ್ಟಡದಲ್ಲಿ ಸುಸಜ್ಜಿತ ಸಭಾಭವನ ನಿರ್ಮಾಣಗೊಂಡಿದ್ದು, ಜ.4ರಂದು ನಡೆಯುವ ದಶ ಸಂಭ್ರಮದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮಾಡಲಿದ್ದಾರೆ ಎಂದು ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ನ ದಶಮಾನೋತ್ಸವ ಸಮಿತಿ ಅಧ್ಯಕ್ಷ ಪಟೇಲ್ ಗೋಪಾಲಕೃಷ್ಣ ಗೌಡ ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಶಾಖಾ ಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಉಪಸ್ಥಿತಿಯಿರಲಿದ್ದು, ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ, ಅಖಿಲ ಕರ್ನಾಟಕ ಮಹಿಳಾ ಒಕ್ಕಲಿಗರ ಘಟಕದ ರಾಜ್ಯಾಧ್ಯಕ್ಷ ಡಾ.ಶಾಂತ ಸುರೇಂದ್ರ ಗೌಡ, ಯುವ ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತಿತರರು ಭಾಗವಹಿಸಲಿದ್ದಾರೆ.
ಸಾಧಕರಿಗೆ ಸನ್ಮಾನ
ಸಂಘದ ಪ್ರಾರ್ಥನೆ ಗೀತೆಯನ್ನು ರಚಿಸಿದ ಪದ್ಮಯ್ಯ ಗೌಡ ಬನ್ನೂರು, 10 ವರ್ಷಗಳಿಂದ ಸಂಘದ ಅಭಿವೃದ್ಧಿಗೆ ಶ್ರಮಿಸಿದ ವೆಂಕಪ್ಪ ಗೌಡ ಕೆಯ್ಯೂರು ಅವರಿಗೆ ಸನ್ಮಾನ, ಸಾಧಕ ಸಮಾಜ ಬಾಂಧವರನ್ನು ಗೌರವ, ಅತ್ಯುತ್ತಮ ಸಂಘದಕ್ಕೆ ಪ್ರಶಸ್ತಿ ಪ್ರಧಾನ ನಡೆಯಲಿದೆ. ಸ್ಮರಣ ಸಂಚಿಕೆಯನ್ನು ಬಿಡುಗಡೆ ಸಾಂಕೇತಿಕವಾಗಿ ಮಾಡಲಾಗುವುದು.
ಬೆಳಿಗ್ಗೆ ಸಮುದಾಯ ಭವನದಲ್ಲಿ ಗಣಪತಿ ಹವನ, ಶ್ರೀ ಸತ್ಯನಾರಾಯಣ ಪೂಜೆ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ, ತಾರಾನಾಥ ಸವಣೂರು ಅವರ ನೇತೃತ್ವದಲ್ಲಿ ರಾಣಿ ಶಶಿಪ್ರಭೆ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾರಾ ಮೆರುಗು
ಮಧ್ಯಾಹ್ನದ ಬಳಿಕ ಚಲನ ಚಿತ್ರ ನಟನಟಿಯರಿಂದ ತಾರಾ ಮೆರುಗು ಕಾರ್ಯಕ್ರಮ ನಡೆಯಲಿದ್ದು, ನಿರ್ದೇಶಕ ಟಿ.ಎಸ್. ನಾಗಾಭರಣ, ಕಿರುತೆರೆ ನಟಿ ವೈಷ್ಣವಿ ಗೌಡ, ಭಜರಂಗಿ -2 ನಲ್ಲಿ ನಟಿಸಿರುವ ಪ್ರಸನ್ನ ಬಾಗಿನ, ಹಿನ್ನಲೆ ಗಾಯಕಿ ಶಮಿತ ಮಲ್ನಾಡು ಮತ್ತಿತರರು ಭಾಗವಹಿಸಲಿದ್ದಾರೆ.
ದಂಪತಿಗಳಿಗೆ ಸನ್ಮಾನ
ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ನ ದಶಮಾನೋತ್ಸವದ ಸವಿನೆನಪಿಗಾಗಿ ಸ್ವಸಹಾಯವಿದ್ದ ಗ್ರಾಮಗಳಲ್ಲಿ ದಾಂಪತ್ಯ ಜೀವನದಲ್ಲಿ 50 ವರ್ಷ ಪೂರೈಸಿದ 370 ಮಂದಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಗಿದೆ ಎಂದರು.
ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಅಧ್ಯಕ್ಷ ಡಿ. ವಿ. ಮನೋಹರ್, ಕಾರ್ಯದರ್ಶಿ ದಿವ್ಯಪ್ರಸಾದ್ ಗೌಡ, ದಶಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹೂವಪ್ಪ ಗೌಡ ಪರ್ಪುಂಜ, ಒಕ್ಕಲಿಗ ವಿವಾಹ ವೇದಿಕೆ ಸಂಯೋಜಕ ಸುರೇಶ್ ಗೌಡ ಕಲ್ಲಾರೆ ಉಪಸ್ಥಿತರಿದ್ದರು.