2004ರ ಹಿಂದೂ ಮಹಾಸಾಗರದ ಸುನಾಮಿಯ ಕರಾಳ ನೆನಪುಗಳು ಇನ್ನೂ ಹಸಿರಾಗಿರುವ ಈ ಸಂದರ್ಭದಲ್ಲಿ, ಡಾ. ಜೆ. ರಾಧಾಕೃಷ್ಣನ್ ಎಂಬ ಐಎಎಸ್ ಅಧಿಕಾರಿಯೊಬ್ಬರು ಮಾನವೀಯತೆಯ ಪ್ರತೀಕವಾಗಿ ನಿಂತಿದ್ದಾರೆ. ಸುನಾಮಿಯಲ್ಲಿ ತಮ್ಮ ಕುಟುಂಬವನ್ನು ಕಳೆದುಕೊಂಡಿದ್ದ ಮೀನಾ ಎಂಬ ಬಾಲಕಿಯ ಮದುವೆಯನ್ನು ಡಾ.ರಾಧಾಕೃಷ್ಣನ್ ಅವರು ನೆರವೇರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸುನಾಮಿ ಸಂಭವಿಸಿದಾಗ ಡಾ. ರಾಧಾಕೃಷ್ಣನ್ ಅವರು ನಾಗಪಟ್ಟಿಣಂನ ಜಿಲ್ಲಾಧಿಕಾರಿಯಾಗಿದ್ದರು. ಅವರು ರಕ್ಷಣಾ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಈ ಸಂದರ್ಭದಲ್ಲಿ ಕೀಚನ್‌ಕುಪ್ಪಂನಲ್ಲಿ ಅವಶೇಷಗಳ ಬಳಿ ಅಳುತ್ತಿದ್ದ ಮೀನಾಳನ್ನು ರಕ್ಷಿಸಿದ್ದರು. ನಂತರ ಮೀನಾಳನ್ನು ಅನ್ನೈ ಸತ್ಯ ಸರ್ಕಾರಿ ಮಕ್ಕಳ ಮನೆಯಲ್ಲಿ ಇರಿಸಲಾಯಿತು.
ಡಾ. ರಾಧಾಕೃಷ್ಣನ್ ಮತ್ತು ಅವರ ಪತ್ನಿ ಕೃತಿಕಾ, ಮೀನಾಳನ್ನು ತಮ್ಮ ಸ್ವಂತ ಮಗುವಿನಂತೆ ನೋಡಿಕೊಂಡರು. ಅವರ ವರ್ಗಾವಣೆಯ ನಂತರವೂ, ಡಾ. ರಾಧಾಕೃಷ್ಣನ್ ಅವರು ಮೀನಾಳನ್ನು ನರ್ಸ್ ಆಗುವಂತೆ ಪ್ರೋತ್ಸಾಹಿಸಿದ್ದಲ್ಲದೇ ಆಕೆಯ ಪ್ರತಿಯೊಂದು ಸಾಧನೆಯ ಮೈಲಿಗಲ್ಲನ್ನು ಖಚಿತಪಡಿಸಿಕೊಂಡರು.
ವರ್ಷಗಳು ಉರುಳಿ, ಮೀನಾ ಮದುವೆಯಾಗಲು ನಿರ್ಧರಿಸಿದಾಗ, ಡಾ. ರಾಧಾಕೃಷ್ಣನ್ ಅವರು ನಾಗಪಟ್ಟಿಣಂಗೆ ತೆರಳಿ ಶ್ರೀ ನೆಲ್ಲುಕ್ಕಡೈ ಮಾರಿಯಮ್ಮನ್ ದೇವಸ್ಥಾನದಲ್ಲಿ ಮದುವೆಯನ್ನು ನೆರವೇರಿಸಿದ್ದಾರೆ. ಮಕ್ಕಳ ಮನೆಯಲ್ಲಿ ಮೀನಾಳೊಂದಿಗೆ ವಾಸಿಸುತ್ತಿದ್ದ ಮತ್ತು ಅಧ್ಯಯನ ಮಾಡುತ್ತಿದ್ದ ಹಲವರು ಸಹ ಸಮಾರಂಭದಲ್ಲಿ ಭಾಗವಹಿಸಿದ್ದರು.
ಇನ್‌ಸ್ಟಾಗ್ರಾಮ್‌ನಲ್ಲಿ ಮದುವೆಯ ಚಿತ್ರಗಳನ್ನು ಹಂಚಿಕೊಂಡ ಡಾ. ರಾಧಾಕೃಷ್ಣನ್, “ನಾಗಪಟ್ಟಿಣಂನಲ್ಲಿ ಮೀನಾ ಮತ್ತು ಮಣಿಮಾರನ್ ಅವರ ಮದುವೆಯಲ್ಲಿ ಭಾಗವಹಿಸಲು ಸಂತೋಷವಾಯಿತು. ನಾಗೈ ಮಕ್ಕಳೊಂದಿಗೆ ನಮ್ಮ ಸುನಾಮಿ ನಂತರದ ಪ್ರಯಾಣವು ಯಾವಾಗಲೂ ಭರವಸೆಯದ್ದಾಗಿದೆ” ಎಂದು ಬರೆದಿದ್ದಾರೆ.
“ಅವರು ಬೆಳೆಯುವುದನ್ನು, ಅಧ್ಯಯನ ಮಾಡುವುದನ್ನು, ಪದವಿ ಪಡೆಯುವುದನ್ನು ಮತ್ತು ಈಗ ಸುಂದರ ಜೀವನದಲ್ಲಿ ನೆಲೆಸುವುದನ್ನು ನೋಡುವುದು ಸಂತೋಷದ ಕಣ್ಣೀರು ತರಿಸುತ್ತದೆ. ನೆನಪಿಡುವ ದಿನ, ರಕ್ತಸಂಬಂಧಗಳನ್ನು ಮೀರಿದ ಕುಟುಂಬ ಬೆಳೆದಿದೆ. ಇಂದು ಮತ್ತು ಹಿಂದಿನ ಕ್ಷಣಗಳ ಕೆಲವು ನೋಟಗಳನ್ನು ಹಂಚಿಕೊಳ್ಳುತ್ತಿದ್ದೇವೆ, ನಾವು ಎಷ್ಟು ದೂರ ಬಂದಿದ್ದೇವೆ ಎಂಬುದನ್ನು ನೆನಪಿಸುತ್ತೇವೆ” ಎಂದು ಅವರು ಹೇಳಿದ್ದಾರೆ. ಅವರು ತಮ್ಮ ತೋಳಿನಲ್ಲಿರುವ ಪುಟ್ಟ ಮೀನಾಳ ಹಳೆಯ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.
ಈ ಹೃದಯಸ್ಪರ್ಶಿ ಕಥೆಯಿಂದ ಅಂತರ್ಜಾಲ ಬಳಕೆದಾರರು ಪ್ರಭಾವಿತರಾಗಿದ್ದು ಮತ್ತು ಅವರ ಅಸಾಧಾರಣ ಕರುಣೆ ಮತ್ತು ಬದ್ಧತೆಯನ್ನು ಶ್ಲಾಘಿಸಿದ್ದಾರೆ. ಅನೇಕ ಬಳಕೆದಾರರು ಅವರನ್ನು “ನಿಜವಾದ ನಾಯಕ”, “ಸ್ಫೂರ್ತಿ” ಮತ್ತು “ಮಾನವೀಯತೆಯ ಉದಾಹರಣೆ” ಎಂದು ಕರೆದಿದ್ದಾರೆ.