ವಿವಿಧ ಇಲಾಖೆಯಲ್ಲಿ ಖಾಲಿಯಿರುವ ಸರ್ಕಾರಿ ಹುದ್ದೆಗಳಿಗೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳನ್ನು ಉತ್ತೀರ್ಣಗೊಳಿಸುವುದಾಗಿ ನಂಬಿಸಿ, ಹಣ ಪಡೆದು ವಂಚಿಸುತ್ತಿದ್ದ ರೈಲ್ವೆ ಇಲಾಖೆಯ ಪ್ರಧಾನ ಟಿಕೆಟ್ ಇನ್‌ಸ್ಪೆಕ್ಟರ್‌ ಗೋವಿಂದರಾಜ್‌ (49) ಅವರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ

ಗೋವಿಂದರಾಜು ಅವರು ಮೆಜೆಸ್ಟಿಕ್‌ ಬಳಿಯ ನೈರುತ್ಯ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ನಾಗರಬಾವಿಯ ‘ಡಿ’ ಗ್ರೂಪ್‌ ಲೇಔಟ್‌ನಲ್ಲಿ ವಾಸವಿದ್ದರು.

ಬಾತ್ಮೀದಾರರು ಪೊಲೀಸರಿಗೆ ನೀಡಿದ್ದ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಯಿತು. ಯೋಗಾ ರಮೇಶ್ ಎಂಬವರ ಮನೆಯಿಂದ ಆರೋಪಿ ಹೊರಕ್ಕೆ ಬಂದು ನಡೆದು ತೆರಳುತ್ತಿದ್ದ ವೇಳೆ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ಮಾತುಕತೆಗೆ ಬಂದಿದ್ದ ಆರೋಪಿ:

ವಿಜಯನಗರದ ನಿವಾಸಿ ರಮೇಶ್ ಅವರ ಪುತ್ರಿ ಡಿ.29ರಂದು ನಡೆದ ಕೆಎಎಸ್‌ ಪರೀಕ್ಷೆ ತೆಗೆದುಕೊಂಡಿದ್ದರು. ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸುವ ಸಂಬಂಧ ಮಾತುಕತೆಗೆ ರಮೇಶ್ ಮನೆಗೆ ಗೋವಿಂದರಾಜು ಬಂದಿದ್ದರು ಎಂದು ಗೊತ್ತಾಗಿದೆ.

ಆರೋಪಿ ಬಳಿಯಿಂದ ನಾಲ್ಕು ಮೊಬೈಲ್‌ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿ ವಿರುದ್ಧ ಬಿಎನ್‌ಎಸ್‌ಎಸ್‌ ಕಲಂ 35ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.‌

‘ಕೆಎಎಸ್‌, ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳನ್ನು ಆರೋಪಿ ಮಧ್ಯವರ್ತಿಗಳ ಮೂಲಕ ಸಂಪರ್ಕಿಸಿ ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸುವುದಾಗಿ ನಂಬಿಸುತ್ತಿದ್ದರು. ಇದಕ್ಕೆ ಹಣ ಕೊಡುವಂತೆ ಹೇಳುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ 2018ರಲ್ಲೂ ಗೋವಿಂದರಾಜು ಅವರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೆಎಎಸ್‌ ಪರೀಕ್ಷೆ ಉತ್ತೀರ್ಣಕ್ಕೆ ₹50 ಲಕ್ಷ:

ವಿವಿಧ ಜಿಲ್ಲೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡವರನ್ನು ಆರೋಪಿ, ಮಧ್ಯವರ್ತಿಗಳ ಮೂಲಕ ಪತ್ತೆ ಹಚ್ಚುತ್ತಿದ್ದರು. ನಂತರ, ಅವರನ್ನು ಮೊಬೈಲ್‌ ಫೋನ್‌ ಮೂಲಕ ಸಂಪರ್ಕಿಸುತ್ತಿದ್ದರು. ಪಿಡಿಒ ಹುದ್ದೆಗೆ ₹25 ಲಕ್ಷ ಹಾಗೂ ಕೆಎಎಸ್‌ ಪೂರ್ವಭಾವಿ ಪರೀಕ್ಷೆಗೆ ₹ 50 ಲಕ್ಷ ನೀಡುವಂತೆ ಮಾತುಕತೆ ನಡೆಸುತ್ತಿದ್ದರು. ಖಚಿತವಾಗಿ ಗೊತ್ತಿರುವ ಪ್ರಶ್ನೆಗಳಿಗೆ ಒಎಂಆರ್‌ ಶೀಟ್‌ನಲ್ಲಿ ಉತ್ತರ ತುಂಬಿಸಿ ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರವನ್ನು ಖಾಲಿ ಬಿಟ್ಟು ಬರುವಂತೆ ಪರೀಕ್ಷಾರ್ಥಿಗಳಿಗೆ ತಿಳಿಸುತ್ತಿದ್ದರು. ಅಲ್ಲದೇ ಪರೀಕ್ಷಾರ್ಥಿಗಳಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪದವಿ ಅಂಕಪಟ್ಟಿಗಳು, ಚೆಕ್‌ ಸೇರಿದಂತೆ ಇತರೆ ದಾಖಲಾತಿಗಳನ್ನು ಪಡೆದುಕೊಳ್ಳುತ್ತಿದ್ದರು. ಇದೇ ರೀತಿ 46ಕ್ಕೂ ಹೆಚ್ಚು ಅಭ್ಯರ್ಥಿಗಳ ದಾಖಲಾತಿ ಪಡೆದುಕೊಂಡಿರುವ ಮಾಹಿತಿ ಸಿಕ್ಕಿದೆ. ಆರೋಪಿ ಗೋವಿಂದರಾಜು ಜತೆಗೆ ಇನ್ನೂ ಕೆಲವರು ಭಾಗಿಯಾಗಿರುವ ಮಾಹಿತಿ ಸಿಕ್ಕಿದೆ. ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ಹೇಳಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!