ಉ ತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಜಿಂಝಾನಾ ಪ್ರದೇಶದಲ್ಲಿ ವಿಶೇಷ ಕಾರ್ಯಪಡೆ(ಎಸ್‌ಟಿಎಫ್) ಎನ್‌ಕೌಂಟರ್ ನಡೆಸಿದ್ದು, ನಾಲ್ವರು ಅಪರಾಧಿಗಳು ಸಾವನ್ನಪ್ಪಿದ್ದಾರೆ.

ಕುಖ್ಯಾತ ಮುಸ್ತಫಾ ಕಗ್ಗಾ ಗ್ಯಾಂಗ್‌ನ ಸದಸ್ಯ ಅರ್ಷದ್ ನೇತೃತ್ವದ ಅಪರಾಧಿಗಳು ದರೋಡೆ, ಡಕಾಯಿತಿ ಮತ್ತು ಕೊಲೆ ಸೇರಿದಂತೆ ಹಲವಾರು ಗಂಭೀರ ಅಪರಾಧಗಳಿಗೆ ಬೇಕಾಗಿದ್ದರು.

ಒಂದು ಲಕ್ಷ ರೂಪಾಯಿಗಳ ಬಹುಮಾನವನ್ನು ಹೊಂದಿದ್ದ ಅರ್ಷದ್ ಹಲವಾರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಪ್ರಕರಣಲ್ಲಿ ಬೇಕಾಗಿದ್ದ ಪ್ರಮುಖನಾಗಿದ್ದ. ದರೋಡೆ, ಡಕಾಯಿತಿ ಮತ್ತು ಕೊಲೆಗೆ ಸಂಬಂಧಿಸಿದ ಒಂದು ಡಜನ್‌ ಗೂ ಹೆಚ್ಚು ಪ್ರಕರಣಗಳಲ್ಲಿ ಆತನನ್ನು ಹುಡುಕಲಾಗಿತ್ತು.

ಅರ್ಷದ್ ಜೊತೆಗೆ, ಅವನ ಸಹಚರರಾದ ಮಂಜೀತ್, ಸತೀಶ್ ಮತ್ತು ಒಬ್ಬ ಅಪರಿಚಿತ ವ್ಯಕ್ತಿಯನ್ನು ಜಿಂಝಾನಾದಲ್ಲಿ ಎಸ್‌ಟಿಎಫ್ ಪಡೆಗಳು ಸುತ್ತುವರೆದವು. ಅಪರಾಧಿಗಳು ಎಸ್‌ಟಿಎಫ್ ತಂಡದ ಮೇಲೆ ಗುಂಡು ಹಾರಿಸಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ಎಸ್‌ಟಿಎಫ್ ಗುಂಡು ಹಾರಿಸಿದೆ. ಅರ್ಷದ್ ಸೇರಿದಂತೆ ನಾಲ್ವರು ಅಪರಾಧಿಗಳು ಸಾವನ್ನಪ್ಪಿದ್ದಾರೆ.

ಎಸ್‌ಟಿಎಫ್ ಎಎಸ್‌ಪಿ ಬ್ರಿಜೇಶ್ ಕುಮಾರ್ ಅವರು ಈ ಸಾವುಗಳನ್ನು ದೃಢಪಡಿಸಿದ್ದು, ಅರ್ಷದ್ ಮತ್ತು ಅವರ ಸಹಚರರು ಹಲವಾರು ಹಿಂಸಾತ್ಮಕ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಗುಂಡಿನ ಚಕಮಕಿಯ ಸಮಯದಲ್ಲಿ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಎಸ್‌ಟಿಎಫ್ ಇನ್ಸ್‌ ಪೆಕ್ಟರ್ ಸುನಿಲ್ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರ ಹೊಟ್ಟೆಗೆ ಎರಡು ಗುಂಡೇಟು ಗಾಯಗಳಾಗಿವೆ. ಅವರನ್ನು ಆರಂಭದಲ್ಲಿ ಕರ್ನಾಲ್‌ನ ಅಮೃತಧಾರ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅವರ ಸ್ಥಿತಿ ಗಂಭೀರವಾಗಿದ್ದ ಕಾರಣ, ಹೆಚ್ಚಿನ ಚಿಕಿತ್ಸೆಗಾಗಿ ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಅಪರಾಧಿಗಳಲ್ಲಿ ಮೂವರು ಗುರುತನ್ನು ದೃಢಪಡಿಸಲಾಗಿದೆ. ಅರ್ಷದ್ ಸಹರಾನ್‌ಪುರದವನಾಗಿದ್ದರೆ, ಮಂಜೀತ್ ಸೋನಿಪತ್‌ನವನಾಗಿದ್ದರೆ ಮತ್ತು ಸತೀಶ್ ಕರ್ನಾಲ್‌ನವನಾಗಿದ್ದು, ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ನಾಲ್ಕನೇ ಅಪರಾಧಿ ಗುರುತು ಇನ್ನೂ ಪತ್ತೆಯಾಗಿಲ್ಲ.

ಈ ಕಾರ್ಯಾಚರಣೆಯು ಈ ಪ್ರದೇಶದಲ್ಲಿ ಅನೇಕ ಅಪರಾಧ ಚಟುವಟಿಕೆಗಳಿಗೆ ಕಾರಣವಾಗಿರುವ ಮುಸ್ತಫಾ ಕಗ್ಗಾ ಗ್ಯಾಂಗ್‌ಗೆ ಗಮನಾರ್ಹ ಹೊಡೆತವಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!