ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ಪುಷ್ಪಕ್ ರೈಲಿನಲ್ಲಿ ಬೆಂಕಿ ವದಂತಿ ಹರಡಿದ ಕೂಡಲೇ ಅದರಲ್ಲಿದ್ದ ಪ್ರಯಾಣಿಕರು ರೈಲಿನ ತುರ್ತು ನಿಲುಗಡೆ ಚೈನ್ ಎಳೆದರು ಹೊರಕ್ಕೆ ಜಿಗಿದರು. ಇದೇ ವೇಳೆ ಎದುರು ಭಾಗದಿಂದ ಬರುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್ ಅಡಿಗೆ ಅನೇಕ ಪ್ರಯಾಣಿಕರು ಬಿದ್ದುಬಿಟ್ಟರು.

ಈ ದುರಂತದಲ್ಲಿ ಕನಿಷ್ಠ 8 ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಭೀಕರ ರೈಲು ಅಪಘಾತ ಬುಧವಾರ (ಜನವರಿ 22) ಸಂಜೆ 4.19 ಕ್ಕೆ ಪರಂದಾ ರೈಲು ನಿಲ್ದಾಣದ ಬಳಿ ಸಂಭವಿಸಿದೆ.

ಬೆಂಕಿ ವದಂತಿಗೆ ಪುಷ್ಪಕ್ ಎಕ್ಸ್‌ಪ್ರೆಸ್‌ನಿಂದ ಜಿಗಿದು ಕರ್ನಾಟಕ ಎಕ್ಸ್‌ಪ್ರೆಸ್ ಅಡಿಗೆ ಬಿದ್ದ ಪ್ರಯಾಣಿಕರು

ರೈಲ್ವೇ ಅಧಿಕಾರಿಗಳ ಪ್ರಕಾರ, ಪುಷ್ಪಕ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ರೈಲಿನ ಚಕ್ರಗಳಿಂದ ಹೊಗೆ ಹೊರಹೊಮ್ಮಿದ ನಂತರ ಬೆಂಕಿಯ ಭಯದಿಂದ ತಪ್ಪಿಸಿಕೊಳ್ಳಲು ತರಾತುರಿಯಲ್ಲಿ ಹಳಿಗಳ ಮೇಲೆ ಹಾರಿದಾಗ ಅಪಘಾತ ಸಂಭವಿಸಿದೆ. ಈ ರೈಲು ಲಕ್ನೋದಿಂದ ಮುಂಬೈಗೆ ಹೋಗುತ್ತಿತ್ತು. ಪ್ರಯಾಣಿಕರು ಏಕಾಕಿ ರೈಲು ಹಳಿಗೆ ಇಳಿದಾಗ ಎದುರುಭಾಗದಿಂದ ಬಂದ ಕರ್ನಾಟಕ ಎಕ್ಸ್‌ಪ್ರೆಸ್ ಅಡಿಗೆ ಬಿದ್ದು ಈ ದುರಂತ ಸಂಭವಿಸಿದೆ.

ಬೆಂಕಿ ವದಂತಿ ಕಾರಣ ರೈಲು ಹಳಿಗೆ ಏಕಾಕಿಯಾಗಿ ಪ್ರಯಾಣಿಕರು ಇಳಿದಿದ್ದು, ಎದುರುಭಾಗದಿಂದ ಬರುತ್ತಿರುವ ರೈಲನ್ನು ಗಮನಿಸಿರಲಿಲ್ಲ.

ಹೀಗಾಗಿ ಹಳಿಗೆ ಇಳಿದ ಪ್ರಯಾಣಿಕರ ಮೇಲೆ ಕರ್ನಾಟಕ ಎಕ್ಸ್‌ಪ್ರೆಸ್ ಹಾದುಹೋಗಿದೆ. ಈ ಹೃದಯವಿದ್ರಾವಕ ಅಪಘಾತದಲ್ಲಿ ಕನಿಷ್ಠ 8 ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಕೇಂದ್ರ ರೈಲ್ವೇ ಮುಖ್ಯ ವಕ್ತಾರ ಸ್ವಪ್ನಿಲ್ ನೀಲಾ ಮಾತನಾಡಿ, ಪುಷ್ಪಕ್ ಎಕ್ಸ್‌ಪ್ರೆಸ್‌ನ ಕೆಲವು ಪ್ರಯಾಣಿಕರು ಕೆಳಗಿಳಿದಿದ್ದರಿಂದ ಮುಂಭಾಗದಿಂದ ಬರುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ ಅವರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಕಿ ವದಂತಿಗೆ ಕಾರಣವೇನು, ಅಂಥದ್ದೇನಾಯಿತು-ರೈಲ್ವೆ ಅಧಿಕಾರಿಗಳು ಹೇಳಿರುವುದು ಇಷ್ಟು

ನಮ್ಮ ಪ್ರಾಥಮಿಕ ವಿಚಾರಣೆಗೆ ಸಿಕ್ಕ ಮಾಹಿತಿಯೆಂದರೆ ಪುಷ್ಪಕ್ ಎಕ್ಸ್‌ಪ್ರೆಸ್‌ನ ಬೋಗಿಯೊಂದರಲ್ಲಿ ಹಾಟ್ ಆಕ್ಸಲ್ ಅಥವಾ ಬ್ರೇಕ್-ಬೈಂಡಿಂಗ್ (ಜಾಮಿಂಗ್) ನಿಂದಾಗಿ ಕಿಡಿಗಳು ಕಾಣಿಸಿಕೊಂಡವು. ಆಗ ಕೆಲವು ಪ್ರಯಾಣಿಕರು ಬೆಂಕಿ ಹೊತ್ತಿಕೊಂಡಿದೆ ಎಂದು ಗಾಬರಿಗೊಂಡರು. ಅವರು, ರೈಲಿನ ತುರ್ತು ನಿಲುಗಡೆ ಚೈನ್ ಎಳೆದರು. ಅಷ್ಟು ಹೊತ್ತಿಗೆ ಕೆಲವರು ರೈಲಿನಿಂದ ಕೆಳಗೆ ಹಾರಿದರು. ಅದೇ ಸಮಯದಲ್ಲಿ, ಕರ್ನಾಟಕ ಎಕ್ಸ್‌ಪ್ರೆಸ್ ಪಕ್ಕದ ಹಳಿಯಲ್ಲಿ ಹಾದುಹೋಯಿತು. ಹಳಿಗೆ ಹಾರಿದವರ ಮೇಲೆ ರೈಲು ಹಾದು ಹೋದ ಕಾರಣ ದುರಂತ ಸಂಭವಿಸಿತು. ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ”ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು. ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಹೋಗಿದ್ದು, ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಜಲಗಾಂವ್‌ನ ಉಸ್ತುವಾರಿ ಸಚಿವರೂ ಆಗಿರುವ ಮಹಾರಾಷ್ಟ್ರ ಸಚಿವ ಗುಲಾಬ್ರಾವ್ ಪಾಟೀಲ್ ಹೇಳಿದ್ದಾರೆ.

ರೈಲು ಅಪಘಾತದ ಬಗ್ಗೆ ಸಿಎಂ ಯೋಗಿ ಸಂತಾಪ

ಪುಷ್ಪಕ್ ರೈಲು ಅಪಘಾತದ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿರುವ ಪ್ರಯಾಣಿಕರಿಗೆ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಮುಖ್ಯಮಂತ್ರಿ ಯೋಗಿ ಆದೇಶಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ವಿಷಯ ತಿಳಿಸಿದೆ. ಅಲ್ಲದೆ, ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಪ್ರಯಾಣಿಕರ ಕುಟುಂಬದವರಿಗೆ ಸಾಂತ್ವನ ಹೇಳಿ ಮುಖ್ಯಮಂತ್ರಿ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!