
ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ವಿಲ್ಲುಕುರಿ ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ಮನೆ ಮಾರಾಟ ಮಾಡಿದ ಹಣದ ಸಮೇತ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ. ಇತ್ತ ಮನೆ ಹಾಗೂ ಮಡದಿ ಇಲ್ಲದೆ ಕಂಗಾಲಾದ ಗಂಡ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬೆಂಜಮಿನ್ (47) ಎಂಬಾತ ತನ್ನ ಕುಟುಂಬದ ನಿರ್ವಹಣೆಗಾಗಿ ದೂರದ ಸೌದಿ ಅರೇಬಿಯಾದಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಆತನ ಪತ್ನಿ ಸುನೀತಾ (45) ಕನ್ಯಾಕುಮಾರಿಯಲ್ಲಿ ವಾಸವಿದ್ದಳು. 19 ವರ್ಷಗಳ ಹಿಂದೆ ಇಬ್ಬರು ವಿವಾಹವಾದರು. ಅವರಿಗೆ ಮಕ್ಕಳಿಲ್ಲ. ಬೆಂಜಮಿನ್ ತಾನು ಸಂಪಾದಿಸಿದ ಹಣವನ್ನು ಪ್ರತಿ ತಿಂಗಳು ಪತ್ನಿಗೆ ಕಳುಹಿಸುತ್ತಿದ್ದ. ಆದರೆ, ಪತ್ನಿ ಮಾತ್ರ ತನ್ನ ಪ್ರಿಯಕರ ಜತೆ ಜಾಲಿ ಮಾಡುತ್ತಿದ್ದಳು.
ಗಂಡ ಹೆಂಡತಿ ನಡುವೆ ಆಗಾಗ ಜಗಳಗಳು ಕೂಡ ನಡೆಯುತ್ತಿದ್ದವು. ಈ ಮಧ್ಯೆ, ಕೊನ್ನಕ್ಕುಳಿವಿಲೈನಲ್ಲಿರುವ ಕುಟುಂಬದ ಮನೆಯನ್ನು ಬೆಂಜಮಿನ್ ಮಾರಾಟ ಮಾಡಿದ್ದ. ಬಳಿಕ ಪಕ್ಕದ ಮನಕವಿಲೈನಲ್ಲಿ ಮನೆ ಕಟ್ಟಿಕೊಂಡು ತನ್ನ ಹೆಂಡತಿಯೊಂದಿಗೆ ವಾಸಿಸುತ್ತಿದ್ದ. ಇದರ ನಡುವೆ ಸುನೀತಾ ಕೆಲವು ವಾರಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು. ಸಂಬಂಧಿಕರು ವಿದೇಶದಲ್ಲಿದ್ದ ಬೆಂಜಮಿನ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಹೀಗಾಗಿ ಬೆಂಜಮಿನ್ ಕೆಲವು ದಿನಗಳ ಹಿಂದೆ ಗ್ರಾಮಕ್ಕೆ ಮರಳಿದರು. ತಮ್ಮ ಪತ್ನಿ ಸುನೀತಾ ನಾಪತ್ತೆಯಾಗಿರುವ ಬಗ್ಗೆ ಇರಾನಿಯಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಇದರ ನಡುವೆ ಬುಧವಾರ ಬೆಂಜಮಿನ್ ಅವರು ತನ್ನ ಮಣಕ್ಕವಿಲೈ ಮನೆಯಲ್ಲಿ ವಿಷ ಸೇವಿಸಿದರು. ಇದು ಗೊತ್ತಾಗಿ ಆತನ ಸಂಬಂಧಿಕರು ಮತ್ತು ನೆರೆಹೊರೆಯವರ ಕೂಡಲೇ ಆಸರಿಪಲ್ಲಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬೆಂಜಮಿನ್ ದುರಂತ ಸಾವಿಗೀಡಾಗಿದ್ದಾರೆ. ಇದಕ್ಕೂ ಮುನ್ನ ಬೆಂಜಮಿನ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಅಳುತ್ತಾ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಎಸ್ಪಿ ಸರ್, ನಾನು ನನ್ನ ಹೆಂಡತಿಯನ್ನು 19 ವರ್ಷಗಳ ಕಾಲ ರಾಣಿಯಂತೆ ನಡೆಸಿಕೊಂಡೆ. ನಾನು ನನ್ನ ಕುಟುಂಬದೊಂದಿಗೆ ಬೇರೆ ಮನೆಯಲ್ಲಿದ್ದೆ. ಆಗಲೇ ಆಕೆಗೆ ಅನೈತಿಕ ಸಂಬಂಧವಿತ್ತು. ನನ್ನ ಹೆಂಡತಿ, ಮನೆಯನ್ನು 33 ಲಕ್ಷ ರೂ.ಗೆ ಮಾರಿದ್ದೇನೆ ಎಂದು ಹೇಳಿದಳು. ಹಣದೊಂದಿಗೆ ಪರಾರಿಯಾಗಿದ್ದಾಳೆ. ಅವರನ್ನು ಮಾತ್ರ ಬಿಡಬೇಡಿ. ಸೈಜು, ಸುನೀತಾ ಹಾಗೂ ಶೀಲಾ ನನ್ನ ಸಾವಿಗೆ ಕಾರಣ. ನನ್ನ ಸಾವಿಗೆ ಕಾರಣರಾದವರಿಗೆ ಮರಣದಂಡನೆ ವಿಧಿಸಿ. ನಾನು ಅದನ್ನು ಮೇಲಿನಿಂದ ನೋಡುತ್ತೇನೆ.
ಅಯ್ಯೋ ದೇವರೇ, ಅವರನ್ನು ಬಿಡಬೇಡ. 19 ವರ್ಷಗಳಿಂದ ಈ ಸೈಜು ನನ್ನನ್ನು ಸ್ವಲ್ಪ ಸ್ವಲ್ಪವಾಗಿ ಕೊಲ್ಲುತ್ತಿದ್ದಾನೆ. ಅವನನ್ನು ಬಿಡಬೇಡ. ಅವಳು (ಸುನೀತಾ) ಅವನ ಮನೆಯಲ್ಲಿ ಇದ್ದಾಳೆ. ನನಗೆ ಗೊತ್ತಿರುವುದೆಲ್ಲಾ ಇಷ್ಟೇ ಎಸ್ಪಿ ಸರ್, ಕ್ರಮ ಕೈಗೊಳ್ಳಿ. ನನ್ನ ಸಾವಿಗೆ ಮೂವರೂ ಕಾರಣ ಎಂದು ಬೆಂಜಮಿನ್ ಪದೇಪದೆ ಹೇಳುತ್ತಾ ಎದೆ ಬಡಿದುಕೊಂಡು ಅತ್ತಿದ್ದಾರೆ.
13.09 ನಿಮಿಷಗಳ ಈ ವಿಡಿಯೋದಲ್ಲಿ, ಬೆಂಜಮಿನ್ ಕಿರುಚುತ್ತಾ 10ಕ್ಕೂ ಹೆಚ್ಚು ಬಾರಿ ಎದೆಗೆ ಹೊಡೆದುಕೊಳ್ಳುತ್ತಾರೆ. ಸೈಜು (ಕಳ್ಳ), ಸುನೀತಾ (ಅವನ ಹೆಂಡತಿ) ಮತ್ತು ಶೀಲಾ (ಅವನ ಹೆಂಡತಿಯ ಸಹೋದರಿ) ಮೂವರನ್ನು ಬಿಡಬೇಡಿ ಎಂದು ಹೇಳಿದ್ದಾರೆ. ಇರಾನಿಯಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಪತ್ನಿ ಸುನೀತಾಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ತಲೆಮರೆಸಿಕೊಂಡಿರುವ ಸೈಜು ಮತ್ತು ಸುನೀತಾ ಸಹೋದರಿ ಶೀಲಾ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
