ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ್ದ ಜಾಗದಲ್ಲಿದ್ದ ಬಿಜೆಪಿ ಮುಖಂಡನ ಮನೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜೇಶ್ ಬನ್ನೂರು ಅವರ ಮೇಲೆ ದೇವಳದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜೇಶ್ ಬನ್ನೂರು ಮತ್ತು ಇತರ 9 ಮಂದಿಯ ವಿರುದ್ಧ ದೇವಳ ಜಾಗಕ್ಕೆ ಅಕ್ರಮ ಪ್ರವೇಶ, ಮನೆ ಧ್ವಂಸ ಮಾಡಿ ಬೆದರಿಕೆ ಒಡ್ಡಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದು ಈ ಘಟನೆಗೆ ಸಂಬಂಧಿಸಿ ದಾಖಲಾದ ಎರಡನೇ ಪ್ರಕರಣವಾಗಿದೆ.

ಮನೆ ದ್ವಂಸಗೊಳಿಸಿದ ಘಟನೆಗೆ ಸಂಬಂಧಿಸಿ ಬುಧವಾರ ರಾಜೇಶ್ ಬನ್ನೂರು ಅವರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯ ವಿನಯ ಸುವರ್ಣ ಹಾಗೂ ಇತರ 12 ಮಂದಿ ವಿರುದ್ಧ ದೂರು ನೀಡಿದ್ದರು. ಈ ಪ್ರಕರಣ ದಾಖಲಾದ ಬೆನ್ನಲ್ಲೇ ಇದೀಗ ರಾಜೇಶ್ ಬನ್ನೂರು ಹಾಗೂ 9 ಮಂದಿಯ ತಂಡದ ವಿರುದ್ಧ ಪ್ರಕರಣ ದಾಖಲಾಗಿದೆ.

‘ಬುಧವಾರ ನಸುಕಿನ 4 ಗಂಟೆ ವೇಳೆಗೆ ಮನೆಯಲ್ಲಿದ್ದಾಗ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರೆ ಮಾಡಿ ದೇವಳಕ್ಕೆ ಸಂಬಂಧಿಸಿದ ಕಟ್ಟಡವವನ್ನು ರಾಜೇಶ್ ಬನ್ನೂರು ಹಾಗೂ ಇತರ 9 ಮಂದಿ ಧ್ವಂಸ ಮಾಡಿ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಕೂಡಲೇ ದೇವಳ ವಠಾರಕ್ಕೆ ಬಂದಾಗ ರಾಜೇಶ್ ಬನ್ನೂರು ಹಾಗೂ ಇತರ 9 ಮಂದಿ ಅಪರಿಚಿತ ವ್ಯಕ್ತಿಗಳು ದೇವಸ್ಥಾನದ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ದೇವಳದ ಜಾಗದಲ್ಲಿದ್ದ ಕಟ್ಟಡವನ್ನು ಧ್ವಂಸಗೊಳಿಸಿದ್ದಾರೆ. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರನ್ನು ಉದ್ದೇಶಿಸಿ ‘ನಾನು ಜಾಗ ಬಿಟ್ಟು ಕೊಡುವುದಿಲ್ಲ, ನನ್ನ ಸಹವಾಸಕ್ಕೆ ಬಂದರೆ ಜನರನ್ನು ಸೇರಿಸಿ ಗಲಾಟೆ ಮಾಡಿಸುತ್ತೇನೆ ಎಂದು ಹೇಳಿ ಪರಾರಿಯಾಗಿದ್ದಾರೆ’ ಎಂದು ದೇವಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!