ಇಷ್ಟು ದಿನ ತಣ್ಣಗಿದ್ದ ಭೀಮಾತೀರದಲ್ಲಿ(Bheema Theera) ಮತ್ತೆ ಬಿಸಿ ರಕ್ತ ಚೆಲ್ಲಿದೆ. ನಟೋರಿಯಸ್ ಖ್ಯಾತಿಯ ಬಾಗಪ್ಪ ಹರಿಜನ್ (Bhagappa Harijan) ಮೇಲೆ ದಾಳಿ ಮಾಡಿ ಬರ್ಬರವಾಗಿ ಕೊಲೆ (Murder) ಮಾಡಲಾಗಿದೆ. ವಿಜಯಪುರದ (Vijayapura) ಬಾಡಿಗೆ ಮನೆಯೊಂದರಲ್ಲಿ ಇದ್ದ ಬಾಗಪ್ಪ ಊಟ ಮುಗಿಸಿ ಹೊರಗೆ ಬಂದು ವಾಕಿಂಗ್ ಮಾಡುವ ವೇಳೆ ದಾಳಿ ಮಾಡಿd ಕೆಲವರು ಮನಸೋ ಇಚ್ಚೆ ಕೊಚ್ಚಿ ಕೊಲೆ ಮಾಡಿದ್ದಾರೆ.

ಘಟನೆ ಬಗ್ಗೆ ದೂರು ನೀಡಿರುವ ಆತನ ಮಗಳು ಪ್ರಮುಖ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿದ್ದಾರೆ.

ಕುಖ್ಯಾತ ಹಂತಕ ಚಂದಪ್ಪ ಹರಿಜನ್ ಶಿಷ್ಯನಾಗಿದ್ದ ಬಾಗಪ್ಪ ಹರಿಜನ್ ಹತ್ಯೆ ಭೀಮಾತೀರದಲ್ಲಿ ಸಂಚಲನ ಮೂಡಿಸಿದೆ. ಈ ಹಿಂದೆ ಗುಂಡಿನ ದಾಳಿಗೂ ಜಗ್ಗದ ಬಾಗಪ್ಪ ನಿನ್ನೆ ರಾತ್ರಿ ನಡೆದ ದಾಳಿಯಲ್ಲಿ ಬಲಿಯಾಗಿದ್ದಾನೆ. ಇನ್ನು ಬಾಗಪ್ಪನ ಹತ್ಯೆಯ ಹಿಂದೆ ಪಿಂಟ್ಯಾ ಎಂಬ ವ್ಯಕ್ತಿಯ ಹೆಸರು ಕೇಳಿಬಂದಿದೆ.

ಪಿಂಟ್ಯಾ ವಿರುದ್ಧ ಬಾಗಪ್ಪನ ಪುತ್ರಿ ದೂರು

ಬಾಗಪ್ಪ ಹರಿಜನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಮಗಳು ಗಂಗೂಬಾಯಿ ದೂರು ನೀಡಿದ್ದಾಳೆ. ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿರು ಆಕೆ, ಈ ಹಿಂದೆ ಕೊಲೆಯಾದ ರವಿ ಅಗರಖೇಡ್ ಸಹೋದರ ಪಿಂಟ್ಯಾ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ. ರವಿ ಸಹೋದರ ಪಿಂಟ್ಯಾ ಹಾಗೂ ಆತನ ಸಹಚರರಿಂದ ಕೃತ್ಯ ನಡೆದಿದೆ ಎಂದು ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಂಟ್ಯಾ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಯಾರಿದು ರವಿ ಅಗರಖೇಡ್?

ರವಿ ಅಗರಖೇಡ್ ವಕೀಲ ವೃತ್ತಿಯಲ್ಲಿ ತೊಡಗಿದ್ದ ಯುವಕನಾಗಿದ್ದು ಬಾಗಪ್ಪನ ದೂರ ಸಂಬಂಧಿ. ಕಳೆದ ವರ್ಷ ವಿಜಯಪುರದ ಕೋರ್ಟ್ನಿಂದ ಸ್ಕೂಟಿಯಲ್ಲಿ ಬರುತ್ತಿರುವಾಗ ಇನ್ನೋವಾ ಕಾರ್ ಡಿಕ್ಕಿಯಾಗಿತ್ತು. ಡಿಕ್ಕಿಯಾದ ಪರಿಣಾಮ ರವಿ ಸ್ಕೂಟಿ ದೂರ ಹೋಗಿ ಬಿದ್ದರೆ, ಆತನ ದೇಹ ಕಾರಿನ ಮುಂಭಾಗದಲ್ಲಿ ಸಿಕ್ಕಿಹಾಕಿಕೊಂಡಿತ್ತು. ಸುಮಾರು 2 ಕಿಮೀ ದೂರದವರೆಗೂ ರವಿ ಅವರನ್ನು ಕಾರು ಎಳೆದೊಯ್ದಿತ್ತು. ಭೀಕರ ಅಪಘಾತದಿಂದ ರವಿ ಮೃತಪಟ್ಟಿದ್ದರು. ಬಾಗಪ್ಪ ಹತ್ಯೆ ಬಳಿಕ ರವಿ ಜೊತೆಗಿನ ಪೋಟೋ ಸ್ಟೇಟಸ್ ಹಾಕಿರುವ ಪಿಂಟು ಅಣ್ಣಾ ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದ್ದಾನೆ ಎನ್ನಲಾಗಿದೆ.

ಸಾಕ್ಷಿ ಹೇಳಲು ಬಂದಿದ್ದ ಬಾಗಪ್ಪ

ಬಾಡಿಗೆ ಮನೆ ಮಾಡಿ ವಿಜಯಪುರ ನಗರ ಹೊರ ವಲಯದ ರೇಡಿಯೋ ಕೇಂದ್ರದ ಬಳಿ ವಾಸವಿದ್ದ ಬಾಗಪ್ಪ ವಿಜಯಪುರ ಕೋರ್ಟ್‌ಗೆ ಹಾಜರಾಗಲು ಬಂದಿದ್ದ. ಒಂದಿಷ್ಟು ದಿನ ಉಳಿದುಕೊಂಡು ಕೋರ್ಟ್ ಗೆ ಹಾಜರಾಗಿ ಪ್ರಮುಖ ಸಾಕ್ಷಿ ನುಡಿಯಲಿದ್ದ. 2018 ಆಗಸ್ಟ್ 8 ರಂದು ಕೋರ್ಟ್ ಆವರಣದಲ್ಲಿ ತನ್ನ ಮೇಲೆ ನಡೆದಿದ್ದ ಫೈರಿಂಗ್ ಕೇಸ್ನಲ್ಲಿ ಸಾಕ್ಷಿ ನುಡಿಯಲು ಬಂದಿದ್ದ. ವಿರೋಧಿ ಗ್ಯಾಂಗ್‌ಗಳಿಗೆ ಗೊತ್ತಾಗದಿರಲಿ ಎಂದು ನಗರದ ಹೊರ ವಲಯದಲ್ಲಿ ಬಾಡಿಗೆ ಮನೆ ಮಾಡಿ ಅಡಿಗೆ ಮಾಡೊಕೆ ತನ್ನ ಸಂಬಂಧಿಯೊಬ್ಬರನ್ನು ಇರಿಸಿಕೊಂಡಿದ್ದ.

ಹಂತಕರಿಗೆ ಬಾಗಪ್ಪ ಇರುವಿಕೆಯ ಮಾಹಿತಿ ಲಭ್ಯವಾಗಿದ್ದು, ಕೆಲ ದಿನಗಳಿಂದ ಹತ್ಯೆಗೆ ಹೊಂಚು ಹಾಕಿರುವ ಸಂಶಯ ವ್ಯಕ್ತವಾಗಿದೆ. ರಾತ್ರಿ ಬಾಗಪ್ಪ ಊಟ ಮಾಡಿ ವಾಕಿಂಗ್‌ಗೆ ಹೊರ ಬಂದ ವೇಳೆ ಅಟ್ಯಾಕ್ ಮಾಡಿದ್ದಾರೆ. ಇನ್ನು ವಿದ್ಯತ್ ಸಂಪರ್ಕ ಕಟ್ ಮಾಡಿ ದಾಳಿ ಮಾಡಿದ್ದಾರೆ ಎನ್ನಲಾಗಿದ್ದು, ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ಸದ್ಯ ಬಾಗಪ್ಪನ ಮಗಳು ಕೊಟ್ಟ ದೂರಿನ ಅನ್ವಯ ಪೊಲೀಸರು ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!