
ಉತ್ತರ ಪ್ರದೇಶದ ಬಂದಾ ಜಿಲ್ಲೆಯ 33 ವರ್ಷದ ಮಹಿಳೆ ಶಹಜಾದಿ ತನ್ನನ್ನು ಯುಎಇನಲ್ಲಿ ಗಲ್ಲಿಗೆ ಹಾಕುವುದಕ್ಕೂ 24 ಗಂಟೆ ಮೊದಲು ತನ್ನ ಕುಟುಂಬಕ್ಕೆ ಕೊನೆಯ ಬಾರಿ ಕರೆ ಮಾಡಿದ್ದಾರೆ. ಅಬುಧಾಬಿ ಜೈಲು ಆಡಳಿತವು ಶಹಜಾದಿಗೆ ತನ್ನ ಕುಟುಂಬದೊಂದಿಗೆ ಮಾತನಾಡಲು ಕೊನೆಯ ಅವಕಾಶ ಮಾಡಿಕೊಟ್ಟಾಗ ಆಕೆ, ಅಬು..ಇದು ನನ್ನ ಕೊನೆಯ ಕರೆ ಎಂದು, ಎಲ್ಲರಿಗೂ ಸಾಂತ್ವನ ಹೇಳಿ ವಿದಾಯ ಹೇಳಿದ್ದಾಳೆ.
ಹೌದು, ಉತ್ತರ ಪ್ರದೇಶದ ಬಂದಾ ಜಿಲ್ಲೆಯ 33 ವರ್ಷದ ಶಹಜಾದಿಯ ಮನಕಲಕುವ ಘಟನೆ ಇದಾಗಿದೆ. ಚಿಕ್ಕಂದಿನಿಂದಲೂ ಕಷ್ಟದ ಜೀವನ ನಡೆಸುತ್ತಾ ಬಂದ ಶಹಜಾದಿಗೆ ಯುಎಇಗೆ ಹೋಗಿ ಅಲ್ಲಿ ಐಷಾರಾಮಿ ಜೀವನ ನಡೆಸಬೇಕೆಂಬ ಆಸೆಯೇನೋ ಇತ್ತು. ಆದರೆ ಅದೇ ಕನಸಿನ ದೇಶ ತನ್ನ ದುಸ್ವಪ್ನವಾಗುತ್ತದೆ ಎಂದು ಆಕೆ ಯೋಚಿಸಿರಲಿಲ್ಲ.
ಮಾಟೌಂಡ್ ಪೊಲೀಸ್ ಠಾಣಾ ವ್ಯಾಪ್ತಿಯ ಗೊಯ್ರಾ ಮುಗ್ಲಿ ಗ್ರಾಮದ ನಿವಾಸಿ ಶಹಜಾದಿ 2020 ರಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಪರಿಚಯವಾದ ಆಗ್ರಾದ ಉಝೈರ್ ಎಂಬವನ ಮಾತು ನಂಬಿ ಐಷಾರಾಮಿ ಜೀವನದ ಭರವಸೆಯೊಂದಿಗೆ 2021ರಲ್ಲಿ ಅಬುಧಾಬಿಗೆ ಹೋಗಿದ್ದಳು. ಅಲ್ಲಿ ಆಕೆಗೆ ಒಂದು ಕುಟುಂಬದ ಮಗುವನ್ನು ನೋಡಿಕೊಳ್ಳುವ ಕೆಲಸ ಸಿಕ್ಕಿತ್ತು. ಆದರೆ ನಾಲ್ಕು ತಿಂಗಳ ಮಗು ಅನಿರೀಕ್ಷಿತವಾಗಿ ಸಾವನ್ನಪ್ಪಿದ್ದು, ಅದರ ಸಾವಿಗೆ ಶಹಜಾದಿಯೇ ಕಾರಣ ಎಂದು ಮಗುವಿನ ಪೋಷಕರು ಆರೋಪಿಸಿದ್ದರು.
ತನಿಖೆಯ ವೇಳೆ ಅಲ್ಲಿನ ಪೊಲೀಸರು ಶಹಜಾದಿಯನ್ನು ಬಂಧಿಸಿದ್ದರು. ನಂತರ ಅಬುಧಾಬಿ ನ್ಯಾಯಾಲಯವು ಶಹಜಾದಿಗೆ ಮರಣದಂಡನೆ ವಿಧಿಸಿತು. ತೀರ್ಪಿನ ನಂತರ ಶಹಜಾದಿ ಅವರ ತಂದೆ ಶಬ್ಬೀರ್ ಖಾನ್, ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಮಧ್ಯಪ್ರಶಿಸಿ, ತನ್ನ ಮಗಳನ್ನು ಉಳಿಸಬೇಕೆಂದು ಮನವಿ ಮಾಡಿದರು.
ಮಗುವಿನ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯವೇ ಕಾರಣ ಎಂದು ಶಹಜಾದಿ ಮತ್ತು ಆಕೆಯ ತಂದೆ ಸಮರ್ಥಿಸಿಕೊಂಡರೂ ಮೃತ ಮಗುವಿನ ಪೋಷಕರು ಶಹಜಾದಿಯ ಮೇಲೆ ದೋಷಾರೋಪಣೆಯನ್ನು ಮಾಡಿದರು. ಇದು ಆಕೆಯ ವಿರುದ್ಧ ಮೊಕದ್ದಮೆ ಹೂಡಲು ಮತ್ತು ಅಂತಿಮವಾಗಿ ಮರಣದಂಡನೆಗೆ ಕಾರಣವಾಯಿತು.






