ಮದುವೆಯಾಗಿ, ತನ್ನ ಹೆಂಡತಿ (Wife) ಜೊತೆ ಮಾವನ ಮನೆಯಿಂದ ಬೆಂಗಳೂರಿಗೆ (Bengaluru) ವಾಪಸ್ ಬರುತ್ತಿದ್ದ ವ್ಯಕ್ತಿಯನ್ನು ಚಾಕು ಇರಿದು ಕೊಲೆ ಮಾಡಲಾಗಿದೆ. ಇಂಥದ್ದೊಂದು ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿಯಲ್ಲಿ (Sirsi) ನಡೆದಿದೆ.

ಗಂಗಾಧರ್ ಎಂಬಾತನೇ ಕೊಲೆಯಾದ ವ್ಯಕ್ತಿ. ಪ್ರೀತಮ್ ಡಿಸೋಜಾ ಎಂಬಾತ ಗಂಗಾಧರ್‌ಗೆ ಚಾಕು ಇರಿದು ಕೊಲೆ ಮಾಡಿ, ಎಸ್ಕೇಪ್ ಆಗಿದ್ದ. ಆದರೆ ಕೊಲೆ ನಡೆದು ಎರಡೇ ಗಂಟೆಯಲ್ಲಿ ಶಿರಸಿ ಪೊಲೀಸರು (Sirsi Police) ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಈ ಕೊಲೆಗೆ ಆತನ ಪತ್ನಿಯೇ ಪರೋಕ್ಷ ಕಾರಣ ಎನ್ನಲಾಗುತ್ತಿದ್ದು, ತನಿಖೆ ನಡೆಯುತ್ತಿದೆ.

ಹೆಂಡತಿ ಜೊತೆಯಿದ್ದಾಗಲೇ ನಡೀತು ಗಂಡನ ಹತ್ಯೆ

ಹೆಂಡತಿ ಜೊತೆ ಮಾವನ ಮನೆಯಿಂದ ಬೆಂಗಳೂರಿಗೆ ವಾಪಸ್ ಬರುತ್ತಿದ್ದ ವ್ಯಕ್ತಿ ಬಸ್‌ನಲ್ಲೇ ಕೊಲೆಯಾಗಿದ್ದಾನೆ. ಗಂಗಾಧರ್ ಎಂಬಾತ ಕೊಲೆಯಾಗಿದ್ದು, ಆರೋಪಿ ಪ್ರೀತಮ್ ಡಿಸೋಜಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಶಿರಸಿ ಸರ್ಕಾರಿ ಆಸ್ಪತ್ರೆ ಬಳಿ ಬಸ್‌ನಲ್ಲಿ ಸಣ್ಣ ಕಿರಿಕ್ ನಡೆದಿದೆ. ಈ ವೇಳೆ ಹೆಂಡತಿ ಜೊತೆ ಇದ್ದ ಗಂಗಾಧರ್ ಮೇಲೆ ಪ್ರೀತಮ್ ಡಿಸೋಜಾ ಚಾಕುವಿನಿಂದ ಅಟ್ಯಾಕ್ ಮಾಡಿದ್ದಾನೆ.

ಮಾವನ ಮನೆಯಿಂದ ವಾಪಸ್ಸಾಗುತ್ತಿದ್ದಾಗ ಕೊಲೆ

ಕೊಲೆಯಾದ ಗಂಗಾಧರ್ ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದವನು. ಈತನಿಗೆ ಕಳೆದ 6 ತಿಂಗಳ ಹಿಂದೆ ಶಿರಸಿಯ ಅಚ್ಚನಳ್ಳಿ ಮೂಲದ ಯುವತಿ ಜೊತೆ ವಿವಾಹವಾಗಿತ್ತು. ನಿನ್ನೆ ಕಾರ್ಯಕ್ರಮದ ನಿಮಿತ್ತ ಶಿರಸಿ ಅಚ್ಚನಳ್ಳಿಯಲ್ಲಿರುವ ಮಾವನ ಮನೆಗೆ ಗಂಡ ಹೆಂಡತಿ ಆಗಮಿಸಿದ್ದರು. ಇಂದು ವಾಪಸ್ ಬೆಂಗಳೂರಿಗೆ ಹಿಂತಿರುಗುತ್ತಿದ್ದಾಗ ಇಂಥದ್ದೊಂದು ದುರ್ಘಟನೆ ನಡೆದಿದೆ.

ಗಂಗಾಧರ್ ಹತ್ಯೆಗೆ ಇದೇ ಕಾರಣವಾಯ್ತಾ?

ಇನ್ನು ಗಂಗಾಧರ್ ಹತ್ಯೆಗೆ ಆತನ ಹೆಂಡತಿಯ ಪ್ರೇಮ ಪ್ರಕರಣವೇ ಕಾರಣವಾಯ್ತಾ ಎಂಬ ಶಂಕೆ ವ್ಯಕ್ತವಾಗಿದೆ. ಪ್ರೇಮ ಪ್ರಕರಣವೇ ಕೊಲೆಗೆ ಮುಖ್ಯ ಕಾರಣ ಅಂತ ಹೇಳಲಾಗ್ತಿದೆ. ಕೊಲೆ ಮಾಡಿದ ಪ್ರೀತಮ್ ಡಿಸೋಜಾಗೂ ಕೊಲೆಯಾದ ಗಂಗಾಧರ ಪತ್ನಿಗೂ ಹಳೆಯ ಸ್ನೇಹ ಇದ್ದಿರಬಹುದು ಎನ್ನಲಾಗಿದೆ. ಕೊಲೆ ಮಾಡಿದವನನ್ನು ಕ್ಷಣದಲ್ಲೇ ಗಂಗಾಧರ್ ಪತ್ನಿ ಮುಖ ಪರಿಚಯ ಗುರುತು ಹಿಡಿದಿದ್ದು, ಆಕೆಯ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ ಎನ್ನಲಾಗಿದೆ.

2 ಗಂಟೆಯಲ್ಲಿ ಆರೋಪಿ ಅರೆಸ್ಟ್, ಪೊಲೀಸರಿಂದ ತನಿಖೆ

ಇನ್ನು ಕೊಲೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಶಿರಸಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿದ್ರು. ಅಷ್ಟರಲ್ಲಾಗಲೇ ಕೊಲೆ ಆರೋಪಿ ಪ್ರೀತಮ್ ಸ್ಥಳದಿಂದ ಎಸ್ಕೇಪ್ ಆಗಿದ್ದ. ಆದರೆ ಮಿಂಚಿನ ವೇಗದಲ್ಲಿ ತನಿಖೆ ಆರಂಭಿಸಿದ ಪೊಲೀಸರು, ಕೇವಲ 2 ಗಂಟೆಯಲ್ಲೇ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ತನಿಖೆ ನಡೆಯುತ್ತಿದ್ದು, ತನಿಖೆ ಬಳಿಕವಷ್ಟೇ ಕೊಲೆಗೆ ನಿಖರ ಕಾರಣ ಏನು ಅನ್ನೋದು ತಿಳಿದು ಬರಲಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!