ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಸ್ಕೂಟರ್‌ನಲ್ಲಿ ಬಂದ ಇಬ್ಬರು ದೊಡ್ಡ ಗಾತ್ರದ ಪೊಟ್ಟಣವನ್ನು ಭಾನುವಾರ ಎಸೆದು ಹೋದ ಕುರಿತು ಕಾರಾಗೃಹದ ಮೇಲ್ವಿಚಾರಕರು ದೂರು ನೀಡಿದ್ದು, ಬರ್ಕೆ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಜೈಲಿನ ಆವರಣದಲ್ಲಿ ಪತ್ತೆಯಾದ ಪೊಟ್ಟಣದಲ್ಲಿ ಬೀಡಿ ಹಾಗೂ ಸಿಗರೇಟುಗಳು ಸಿಕ್ಕಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮಾಜಿ ಮೇಯರ್‌ ಕವಿತಾ ಸನಿಲ್‌ ಅವರು ಜೈಲ್ ರಸ್ತೆಯಲ್ಲಿ ಕಾರಿನಲ್ಲಿ ಸಾಗುವಾಗ ಸ್ಕೂಟರ್‌ನಲ್ಲಿ ಬಂದ ಇಬ್ಬರು ಪೊಟ್ಟಣವೊಂದನ್ನು ಜೈಲಿನ ಒಳಗೆ ಎಸೆದಿದ್ದನ್ನು ನೋಡಿದ್ದರು.

‘ಜೈಲಿನ ಒಳಗೆ ಭಾನುವಾರ ಮಧ್ಯಾಹ್ನ 2.30ರ ಸುಮಾರಿಗೆ ಪೊಟ್ಟಣವನ್ನು ಎಸೆದವರನ್ನು ನಾನು ಕಾರಿನಲ್ಲಿ ಬೆನ್ನಟ್ಟಿ ಅಡ್ಡಗಟ್ಟಿದೆ. ಆದರೆ ಅವರು ಓಣಿ ರಸ್ತೆಗಳಲ್ಲಿ ನುಸುಳಿ ತಪ್ಪಿಸಿಕೊಂಡರು. ಅವರು ಬಳಸಿದ ಸ್ಕೂಟರ್‌ನಲ್ಲಿ ನಂಬರ್ ಪ್ಲೇಟ್‌ ಇತ್ತಾದರೂ, ಅದರ ಸಂಖ್ಯೆಗಳು ಕಾಣಿಸುತ್ತಿರಲಿಲ್ಲ’ ಎಂದು ಕವಿತಾ ಸನಿಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಜೈಲಿಗೆ ಮರಳಿದಾಗ ಅಲ್ಲಿ ಒಬ್ಬರು ಭದ್ರತಾ ಸಿಬ್ಬಂದಿಯೂ ಇದ್ದರು. ಅವರಿಗೆ ವಿಷಯವೇ ಗೊತ್ತಿರಲಿಲ್ಲ. ‘ಭದ್ರತಾ ಸಿಬ್ಬಂದಿ ಇದ್ದೂ ಜೈಲಿನೊಳಗೆ ಈ ರೀತಿ ಪೊಟ್ಟಣಗಳನ್ನು ಬಿಸಾಡುತ್ತಾರೆ ಎಂದರೆ ಹೇಗೆ’ ಎಂದು ತರಾಟೆಗೆ ತೆಗೆದುಕೊಂಡ ಬಳಿಕ ಪೊಟ್ಟಣ ಸಿಕ್ಕಿದ್ದನ್ನು ಒಪ್ಪಿಕೊಂಡಿದ್ದಾರೆ. ಇಲಾಖೆಗೆ ಹಾಗೂ ಸರ್ಕಾರಕ್ಕೆ ಗೊತ್ತಿದ್ದೇ ಈ ರೀತಿ ನಡೆಯುತ್ತಿದೆ’ ಎಂದು ಅವರು ಆರೋಪಿಸಿದರು.

ಈಗ ಜೈಲಿನಲ್ಲಿ ಸಿಕ್ಕಿದ ಪೊಟ್ಟಣದಲ್ಲಿ ಚಹಾ ಹುಡಿ, ಬೀಡಿ, ಸಿಗರೇಟು ಸಿಕ್ಕಿದೆ ಎಂದು ಕತೆ ಹೇಳುತ್ತಿದಾರೆ. ನಮ್ಮ ಕಿವಿಗೆ ಇವರು ಹೂವು ಇಡುವುದು ಬೇಡ. ಮುಂದಾದರೂ ಇಂತಹ ಚಟುವಟಿಕೆಗೆ ಕಡಿವಾಣ ಹಾಕಬೇಕು. ನಂಬರ್ ಪ್ಲೇಟ್ ಇಲ್ಲದ ವಾಹನದಲ್ಲಿ ಬಂದು ನಾಳೆ ಬಾಂಬ್‌ ಏನಾದರೂ ಇಟ್ಟರೆ ಯಾರು ಹೊಣೆ’ ಎಂದರು.

Leave a Reply

Your email address will not be published. Required fields are marked *

Join WhatsApp Group
error: Content is protected !!