
ಇಶಾ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಶಿವರಾತ್ರಿ ಜಾಗರಣೆ ಕಾರ್ಯಕ್ರಮಕ್ಕೆ ಹೋಗಿದ್ದು ನನ್ನ ವೈಯಕ್ತಿಕ ನಂಬಿಕೆ. ಅದನ್ನು ಯಾರೂ ಕೇಳುವಂತಿಲ್ಲ. ಕಮೆಂಟ್ ಮಾಡುವವರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ತಿರುಗೇಟು ನೀಡಿದರು.
ಅಮಿತ್ ಶಾ ಅವರೊಂದಿಗೆ ವೇದಿಕೆ ಹಂಚಿಕೊಂಡ ಜಾಗರಣೆ ಕಾರ್ಯಕ್ರಮದ ವಿಚಾರವಾಗಿ ಕಾಂಗ್ರೆಸ್ ಪಕ್ಷದಲ್ಲೇ ಪರ-ವಿರೋಧ, ಸಮರ್ಥನೆಯ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನೋಡ್ರಿ.. ನಾನು ಶಿವರಾತ್ರಿ ಹಬ್ಬದ ನಿಮಿತ್ತ ಹೋಗಿದ್ದೆ. ಇದು ನನ್ನ ಸ್ವಂತ ನಂಬಿಕೆ. ಯಾರೋ ಏನೇನು ಹೇಳಿದರೆ ಅದು ಅವರವರ ವೈಯಕ್ತಿಕ. ಶಿವರಾತ್ರಿಗೆಂದು ಹೋಗಿದ ಬಗ್ಗೆಯೇ ಕಮೆಂಟ್ ಮಾಡಿದರೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದರು.
ನನಗೆ ಯಾರು ಏನೇನು ಕಮೆಂಟ್ ಮಾಡಿದ್ದಾರೆ ಅಂತಲೂ ಗೊತ್ತಿಲ್ಲ. ನೀವು ಮಾಧ್ಯಮದವರು ಹೇಳಿದ ಮೇಲೆ ಗೊತ್ತಾಗಿದೆ. ಯಾರ್ ಯಾರೋ ಟ್ವೀಟ್ ಮಾಡ್ತಾರೆ ಅಂತಾ ನಾನು ಅದಕ್ಕೆಲ್ಲ ಉತ್ತರ ಕೊಡೋಕೆ ಆಗಲ್ಲ. ಯಾರ ಮಾತುಗಳನ್ನು ಯಾರೂ ತಡೆಯೋಕೆ ಆಗಲ್ಲ. ಇಂಥದಕ್ಕೆಲ್ಲ ನಾನು ಉತ್ತರ ಕೊಡಲ್ಲ. ಅವರೆಲ್ಲ ನ್ಯಾಷನಲ್ ಲೀಡರ್ಗಳು. ಆದರೆ ಇದು ನನ್ನ ನಂಬಿಕೆ… ಹಾಗಾಗಿ ನಾನು ಹೋಗಿದ್ದೆ. ನಾನು ಅಲ್ಲಿಗೆ ಹೋಗಿರುವುದರ ಬಗ್ಗೆ ಯಾರೂ ಕೇಳುವ ಅಗತ್ಯವಿಲ್ಲ. ನೇರವಾಗಿ ನನ್ನ ಎದುರಿಗೆ ಬಂದು ಮಾತನಾಡಲಿ, ಆಗ ಉತ್ತರ ಕೊಡುವೆ. ಶಿವರಾತ್ರಿಗೆ ಹೋಗಿರುವ ವಿಚಾರವಾಗಿ ಯಾರೂ ಸ್ವಾಗತ ಮಾಡುವುದು ಬೇಕಿಲ್ಲ, ಟೀಕಿಸುವುದೂ ಬೇಡ ಎಂದು ಸ್ಪಷ್ಟಪಡಿಸಿದರು.
ಡಿಕೆಶಿ ಹಿಂದೂವಾದಿ ಆಗಿರುವುದಕ್ಕೆ ಅವರನ್ನು ಕಾಂಗ್ರೆಸ್ ಮೂಲೆಗುಂಪು ಮಾಡುತ್ತಿದೆ ಎಂದು ಒಂದೆಡೆ ಬಿಜೆಪಿ ಹೇಳುತ್ತಿದ್ದರೆ, ಅತ್ತ ಕಾಂಗ್ರೆಸ್ ಒಳಗೆ ಪಕ್ಷದ ಸಿದ್ಧಾಂತ ಎಂಬ ರೇಖೆ ಇದೆ. ಆರ್ಎಸ್ಎಸ್ ಪ್ರಾಯೋಜಿತ ಕಾರ್ಯಕ್ರಮ, ಕೇಂದ್ರ ಸಚಿವ ಅಮಿತ್ ಶಾ ಭಾಗಿಯಾಗಿರುವ ಶಿವರಾತ್ರಿ ಕಾರ್ಯಕ್ರಮದಲ್ಲಿ ಡಿಕೆಶಿ ಒಂದೇ ವೇದಿಕೆ ಹಂಚಿಕೊಂಡಿರುವುದರ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ.ಮೋಹನ್ ಸೇರಿದಂತೆ ಕೆಲ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸುತ್ತಿರುವುದಕ್ಕೆ ಡಿಕೆಶಿ ಇಂದು ನೇರವಾಗಿ ಈ ಮೇಲಿನಂತೆ ಟಾಂಗ್ ನೀಡಿದರು.
