
ಖ್ಯಾತ ಗೀತ ರಚನೆಕಾರ ಜಾವೇದ್ ಅಖ್ತರ್ ತಮ್ಮ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ನಾಲ್ಕು ವರ್ಷಗಳ ಬಳಿಕ ಶುಕ್ರವಾರ ಮಧ್ಯಸ್ಥಿಕೆ ಮೂಲಕ ಬಾಲಿವುಡ್ ನಟಿ ಕಂಗನಾ ರಣಾವತ್ ಬಗೆಹರಿಸಿಕೊಂಡಿದ್ದಾರೆ. ಹಿರಿಯ ಸಾಹಿತಿಗೆ ಬಿಜೆಪಿ ಸಂಸದೆ ಕ್ಷಮೆಯಾಚಿಸಿದ್ದಾರೆ.
ಇವರಿಬ್ಬರೂ ಶುಕ್ರವಾರ ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿ ಪರಸ್ಪರರ ವಿರುದ್ಧ ಸಲ್ಲಿಸಿದ್ದ ದೂರುಗಳನ್ನು ಹಿಂಪಡೆಯುವ ನಿರ್ಧಾರವನ್ನು ತಿಳಿಸಿದರು.
ನ್ಯಾಯಾಲಯಕ್ಕೆ ಹಾಜರಾದ ನಂತರ, ಕಂಗನಾ ಜಾವೇದ್ ಅಖ್ತರ್ ಜೊತೆಗಿನ ಫೋಟೊವನ್ನು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದು, ತಮ್ಮ ನಡುವಿನ ಕಾನೂನು ಹೋರಾಟಕ್ಕೆ ತೆರೆಬಿದ್ದಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ನ್ಯಾಯಾಲಯವು ಮರುದಿನ ಔಪಚಾರಿಕ ಆದೇಶವನ್ನು ನೀಡಲಿದೆ.
ತಪ್ಪು ತಿಳುವಳಿಕೆಯಿಂದಾಗಿ ತಾನು ಜಾವೇದ್ ಅಖ್ತರ್ ಅವರ ವಿರುದ್ಧ ಹೇಳಿಕೆ ನೀಡಿದ್ದೇನೆ ಮತ್ತು ಇದರಿಂದ ಅವರಿಗೆ ಉಂಟಾದ ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇನೆ. ಭವಿಷ್ಯದಲ್ಲಿ ಅಂತಹ ಹೇಳಿಕೆಯನ್ನು ನೀಡುವುದಿಲ್ಲ ಎಂದು ನಟಿ ಹೇಳಿದ್ದಾರೆ.
ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ಕಂಗನಾ, ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನಲ್ಲಿ ತನ್ನ ಹೆಸರನ್ನು ಎಳೆದು ತಂದಿದ್ದರು. ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುವ ಮೂಲಕ ಮಾನಹಾನಿ ಉಂಟುಮಾಡಿದ್ದಾರೆ ಎಂದು ಆರೋಪಿಸಿ ಜಾವೇದ್ ಅಖ್ತರ್ 2020 ರಲ್ಲಿ ಕಂಗನಾ ರಣಾವತ್ ವಿರುದ್ಧ ದೂರು ದಾಖಲಿಸಿದ್ದರು.
ಬಳಿಕ ಕಂಗನಾ ಕೂಡ ಜಾವೇದ್ ಅಖ್ತರ್ ಅವರ ವಿರುದ್ಧ ದೂರು ದಾಖಲಿಸಿದ್ದರು. 2016ರಲ್ಲಿ ಅಖ್ತರ್ ಅವರ ನಿವಾಸಕ್ಕೆ ಭೇಟಿ ನೀಡಿದಾಗ ಅವರು ತನ್ನನ್ನು ಬೆದರಿಸಿದನು ಮತ್ತು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು ಎಂದು ಆರೋಪಿಸಿದ್ದರು.
ಬಾಂದ್ರಾದ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಒಂದು ಗಂಟೆ ಸಂಧಾನ ನಡೆಯಿತು. ಈ ವೇಳೆ ಈ ವಿಷಯವನ್ನು ಇತ್ಯರ್ಥಗೊಳಿಸಲಾಯಿತು ಎಂದು ರಣಾವತ್ ಅವರ ವಕೀಲ ರಿಜ್ವಾನ್ ಸಿದ್ದಿಕಿ ಮತ್ತು ಅಖ್ತರ್ ಪರ ವಕೀಲ ಜಯ್ ಕುಮಾರ್ ಭಾರದ್ವಾಜ್ ಹೇಳಿದ್ದಾರೆ.
ಕಂಗನಾ ವಿರುದ್ದ ಜಾಮೀನು ರಹಿತ ವಾರೆಂಟ್ ಕೋರಿ ಜಾವೇದ್ ಅಖ್ತರ್ ಅರ್ಜಿ ಸಲ್ಲಿಕೆ
