
ಮ ನೆಯಲ್ಲಿ ಮಕ್ಕಳಿದ್ದಾಗ ಹೇಗೆ ಆಟ-ಸಾಮಾನುಗಳು ಮನೆ ತುಂಬಾ ಹರಡಿರುತ್ತದೋ, ಹಾಗೇ ಅಲ್ಲಲ್ಲಿ ಈ ಚಾಕಲೇಟ್ – ಬಿಸ್ಕೆಟ್, ಸಿಹಿ ತಿಂಡಿಗಳ ತುಂಡುಗಳು ಬಿದ್ದಿರುತ್ತವೆ. ಹಠ ಮಾಡುತ್ತಿದ್ದಾಗ ಅವರುಗಳನ್ನು ಸಮಾಧನ ಮಾಡಲು ಅಂತ ಈ ತಿಂಡಿಗಳನ್ನು ಕೊಡುತ್ತೇವೆ.
ಆದ್ರೆ ಅವರೋ ಅದನ್ನು ಪೂರ್ತಿ ತಿನ್ನದೇ ಸೋಫಾದ ಮೇಲೋ, ಚೇರ್ ಕೆಳಗೋ ಅಂತ ಎಲ್ಲೆಲ್ಲೋ ಬೀಸಾಕಿ ಬಿಡುತ್ತಾರೆ. ಪರಿಣಾಮ ಇರುವೆಗಳು ಸಾಲು ಮನೆಯನ್ನು ಹೊಕ್ಕಿ ಬಿಡುತ್ತವೆ. ಯಾಕೆಂದ್ರೆ ಸಿಹಿ ಇದ್ದ ಕಡೆ ಇರುವೆ ಬರುವುದು ಸಾಮಾನ್ಯ ಅಲ್ಲವೇ. ಆದರೆ ಇದರ ಹೊರತಾಗಿ ಕೆಲವೊಮ್ಮೆ ಮನೆಯಲ್ಲಿ ಮೂಲೆಗಳಲ್ಲಿ, ಗೋಡೆ ಬದಿಯಲ್ಲಿ ಈ ಇರುವೆ ಗೂಡು ಕಾಣಿಸಿಕೊಳ್ಳುತ್ತದೆ. ಅಲ್ಲಿ ಯಾವ ಸಿಹಿ ಪದಾರ್ಥ ಸೋಕದೇ ಇದ್ದರೂ ಇರುವೆಗಳು ಬಂದು ಬಿಡಾರ ಹಾಕುತ್ತದೆ.
ನಿಮ್ಗೂ ಇಂತಹ ಅನುಭವ ಆಗಿದ್ದೀಯಾ…? ಒಂದೆರೆಡು ಅಲ್ವಾ ಅಂತ ಸುಮನ್ನೆ ಬಿಟ್ಟು ಇರುವೆ ಈಗ ಗೂಡು ಕಟ್ಟಿಕೊಂಡು ಝಂಡಾ ಹೂಡಿದ್ದೀಯಾ..? ಚಿಂತಿಸಬೇಡಿ ನಾವು ಹೇಳುವ ಈ ಟಿಪ್ಸ್ ಫಾಲೋ ಮಾಡಿ ಸಾಕು.
ಉಪ್ಪು ಮತ್ತು ಅರಿಶಿನ ಬಳಸಿ : ಇರುವೆ ಕಾಟ ಅಡುಗೆ ಮನೆಯಲ್ಲಿ ಹೆಚ್ಚಾಗಿದೆ ಎಂದಾದ್ರೆ ಅಡುಗೆ ಮನೆ ಕಟ್ಟೆ ಮೇಲೆಲ್ಲ ಉಪ್ಪು ಬೆರೆಸಿದ ಅರಿಶಿನ ಉದುರಿಸಿ.
ಉಪ್ಪು ಮತ್ತು ಕಾಳುಮೆಣಸು : ಇರುವೆಗಳನ್ನು ಓಡಿಸಲು ನೀವು ಕಾಳುಮೆಣಸಿನ ಸ್ಪ್ರೇ ಬಳಸಿ. ಒಂದು ಕಪ್ ನೀರು ಕುದಿಸಿ ಅದಕ್ಕೆ ಉಪ್ಪು ಹಾಗೂ ಕಾಳುಮೆಣಸಿನ ಪುಡಿಯನ್ನು ಹಾಕಿ ಕುದಿಸಿ, ಅದು ತಣ್ಣಗಾದ ಮೇಲೆ ಸ್ಪ್ರೇ ಬಾಟಲ್ ಗೆ ಹಾಕಿ ಬಳಸಿ. ಇದು ಇರುವೆಯನ್ನು ಓಡಿಸಬಹುದು.
ಕೆಂಪು ಮೆಣಸು: ಒಂದು ಚಮಚ ಕೆಂಪು ಮೆಣಸಿನ ಪುಡಿಯನ್ನು ನೀರಿನಲ್ಲಿ ಬೆರೆಸಿ ಬಾಗಿಲು ಮತ್ತು ಕಿಟಕಿಗಳ ಬಳಿ ಚಿಮುಕಿಸುವುದರಿಂದ ಮನೆಯೊಳಗೆ ಇರುವೆಗಳು ಬರೋದಿಲ್ಲ.
ಉಪ್ಪು – ನಿಂಬೆ: ಉಪ್ಪು ಮತ್ತು ನಿಂಬೆ ಹಣ್ಣಿನ ರಸ ನೊಣ ಓಡಿಸಲು ಸಹಾಯ ಮಾಡುತ್ತದೆ. ಒಂದು ಕಪ್ ನೀರಿಗೆ ನಿಂಬೆ ರಸ ಮತ್ತು ಎರಡು ಚಮಚ ಉಪ್ಪನ್ನು ಬೆರೆಸಿ ಮಿಶ್ರಣವನ್ನು ಚೆನ್ನಾಗಿ ತಯಾರಿಸಿ. ಈಗ ಅದನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಇರುವೆಗಳ ಗೂಡಿನ ಮೇಲೆ ಸ್ಪ್ರೇ ಮಾಡಿ.
ದಾಲ್ಚಿನಿ ಪುಡಿ: ದಾಲ್ಚಿನಿ ಇರುವೆಗಳನ್ನು ಓಡಿಸಲು ತುಂಬಾ ಸಹಕಾರಿ ಯಾಗಿದ್ದು, ದಾಲ್ಚಿನಿ ಪುಡಿಯನ್ನು ಇರುವೆಗಳು ಹೆಚ್ಚಾಗಿ ಕಂಡುಬರುವ ಸ್ಥಳಗಳಲ್ಲಿ ಸ್ವಲ್ಪ ಸಿಂಪಡಿಸಿ. ದಾಲ್ಚಿನಿ ಘಾಟಿಗೆ ಇರುವೆಗಳು ಮನೆಯೊಳಗಡೆ ಪ್ರವೇಶ ಮಾಡಲ್ಲ.
