
ಪುತ್ತೂರು: ತಾಲೂಕಿನ ವಿವಿಧ ಭಾಗಗಳಲ್ಲಿ ಬುಧವಾರ ಸಂಜೆ ವರ್ಷದ ಮೊದಲ ಮಳೆ ಸುರಿದಿದೆ. ಬಿಸಿಲಿನ ಝಳಕ್ಕೆ ಬಸವಳಿದಿದ್ದ ಜನರಿಗೆ ಹಾಗೂ ಭೂಮಿಗೆ ವರ್ಷಧಾರೆ ತಂಪೆರೆದಿದೆ.
ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಇತ್ತು. ನಾಲ್ಕು ಗಂಟೆಯ ಸುಮಾರಿಗೆ ಸುರಿದ ತುಂತುರು ಮಳೆ ಸುರಿಯಿತು ನಂತರ ಬಿರುಸು ಪಡೆಯಿತು… ದಿಢೀರ್ ಆಗಿ ಸುರಿದ ಮಳೆಯಿಂದಾಗಿ ಜನರ ಓಡಾಟಕ್ಕೆ ತೊಂದರೆಯಾಯಿತು. ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಮಳೆಯಿಂದ ರಕ್ಷಣೆ ಪಡೆಯಲು ಪರದಾಡಿದರು.
ಬೆಳ್ತಂಗಡಿ :ಹವಾಮಾನ ಇಲಾಖೆ ಮುನ್ಸೂಚನೆಯಂತೆ ಇಂದು ಕರಾವಳಿ ಭಾಗದ ಹಲವೆಡೆ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ. ಕಳೆದ ಕೆಲ ತಿಂಗಳಿನಿಂದ ಬಿಸಿಲ ಬೇಗೆಯಿಂದ ಬೇಸತ್ತ ಕರಾವಳಿ ಜನತೆಗೆ ವರುಣ ಇದೀಗ ತಂಪೆರೆದಿದ್ದಾನೆ.
ಇಂದು ಕರಾವಳಿ ಭಾಗದಲ್ಲಿ ಭಾರೀ ಬಿಸಿಲಿನೊಂದಿಗೆ ಸಂಜೆ ವೇಳೆ ಮೋಡ ಕವಿದ ವಾತಾವರಣವಿತ್ತು. ಇಂದಿನ ಹವಾಮಾನ ಮುನ್ಸೂಚನೆಯಲ್ಲಿ ಕರಾವಳಿಯಲ್ಲಿ ಮಳೆಯಾಗುವ ಸಾಧ್ಯತೆಯಿತ್ತು ಎನ್ನಲಾಗಿತ್ತು. ಇದೀಗ ಬೆಳ್ತಂಗಡಿಯ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ.
ಬಿಸಿಲಿಗೆ ಸುಸ್ತಾಗಿದ್ದ ಜನತೆ ಆಲಿಕಲ್ಲು ಮಳೆಯ ಸಿಂಚನಕ್ಕೆ ಫುಲ್ ಖುಷ್ ಆಗಿದ್ದಾರೆ. ಫೋಟೋ ಹಾಗೂ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಮಂಗಳವಾರ ಹಲವೆಡೆ ಸಂಜೆ ಸಾಧಾರಣ ಮಳೆಯಾಗಿತ್ತು.
