ಇತ್ತೀಚೆಗೆ ತೆರೆಕಂಡ ತೆಲುಗಿನ ಲಕ್ಕಿ ಭಾಸ್ಕರ್(Lucky Bhaskar) ಸಿನಿಮಾ ಮಾದರಿಯಲ್ಲಿ ಖಾಸಗಿ ಬ್ಯಾಂಕ್ವೊಂದರ (Bank) ಉಪ ವ್ಯವಸ್ಥಾಪಕಿ ವೃದ್ಧೆಗೆ ವಂಚಿಸಿದ್ದಾಳೆ. ಪ್ರಕರಣದಲ್ಲಿ ನಾಲ್ವರು ಆರೋಪಿಗಳು ಶಾಮೀಲಾಗಿದ್ದು, ಗಿರಿನಗರ ಪೊಲೀಸರು ( Girinagar Police) ಬಂಧಿಸಿದ್ದಾರೆ.

ಬ್ಯಾಂಕ್ ಉಪ ವ್ಯವಸ್ಥಾಪಕಿ ಮೇಘನಾ, ಆಕೆಯ ಪತಿ ಶಿವಪ್ರಸಾದ್, ಸ್ನೇಹಿತರಾದ ವರದರಾಜು ಮತ್ತು ಅನ್ವರ್ ಘೋಷ್ ಬಂಧಿತ ಆರೋಪಿಗಳು.

ಗಿರಿನಗರದಲ್ಲಿರುವ ಇಂಡಸ್ ಇಂಡ್ ಬ್ಯಾಂಕ್ನ ಉಪ ವ್ಯವಸ್ಥಾಪಕಿ ಮ್ಯಾನೆಜರ್ ಮೇಘನಾ ಎಫ್ಡಿ ಅಕೌಂಟ್ ಮಾಡಿಕೊಡುವುದಾಗಿ ವೃದ್ಧೆಗೆ ಸುಳ್ಳು ಹೇಳಿ ಆರ್ಟಿಜಿಎಸ್ ಕಾಗದಕ್ಕೆ ಸಹಿ ಮಾಡಿಸಿಕೊಂಡಿದ್ದಾಳೆ. ಬಳಿಕ ತಮ್ಮ ಹೊಸ ಬ್ಯಾಂಕ್ ಖಾತೆ ತೆಗೆದು ಆರ್ಟಿಜಿಎಸ್ ಮುಖಾಂತರ 50 ಲಕ್ಷ ರೂಪಾಯಿ ವರ್ಗಾಯಿಸಿಕೊಂಡಿದ್ದಾಳೆ.

ಮೇಘನಾ ಹೆಣೆದ ಮೋಸದ ಜಾಲ ಹೇಗಿತ್ತು?

ವೃದ್ಧ ದಂಪತಿ ಗಿರಿನಗರದಲ್ಲಿನ ಇಂಡಸ್ ಇಂಡ್ ಬ್ಯಾಂಕ್ನಲ್ಲಿ ಜಂಟಿ ಖಾತೆ ತೆರೆದಿದ್ದಾರೆ. ಇದೇ ಬ್ಯಾಂಕ್ನಲ್ಲಿ ಎಫ್ ಡಿ ಖಾತೆ ಕೂಡ ಹೊಂದಿದ್ದಾರೆ. ವೃದ್ಧೆಗೆ ಬ್ಯಾಂಕ್ನಲ್ಲಿ ಉಪ ವ್ಯವಸ್ಥಾಪಕಿ ಮೇಘನಾ ಪರಿಚಯವಾಗಿದೆ. ಮೇಘನಾ ವೃದ್ಧೆಗೆ ಬ್ಯಾಂಕ್ ವ್ಯವಹಾರದಲ್ಲಿ ಸಹಾಯ ಮಾಡುತ್ತಿದ್ದಳು. ಕುಟುಂಬದ ಎಲ್ಲ ವಿಚಾರವನ್ನು ಮೇಘನಾ ಜೊತೆ ವೃದ್ಧೆ ಹಂಚಿಕೊಳ್ಳುತ್ತಿದ್ದಳು. ಚಾಮರಾಜಪೇಟೆಯಲ್ಲಿನ ಮನೆ ಮಾರಿರುವ ವಿಚಾರವನ್ನು ಕೂಡ ವೃದ್ಧೆ, ಮೇಘನಾಗೆ ಹೇಳಿದ್ದಳು.

ಮನೆ ಮಾರಾಟದಿಂದ ವೃದ್ಧ ದಂಪತಿಯ ಬ್ಯಾಂಕ್ ಖಾತೆಗೆ ಒಂದು ಕೋಟಿ ಹಣ ಜಮೆಯಾಗಿತ್ತು. ಒಂದು ದಿನ, ವೃದ್ಧೆ ಬ್ಯಾಂಕ್ಗೆ ಹೋದಾಗ ಎರಡು ಬಾಂಡ್ ಅವಧಿ ಮುಗಿದಿದೆ ಎಂದು ಮೇಘಟನಾ ಕಥೆ ಕಟ್ಟಿದ್ದಾಳೆ. ಹೊಸ ಬಾಂಡ್ ಖರೀದಿಗೆ ದಾಖಲಾತಿ ಮತ್ತು ಚೆಕ್ ಅವಶ್ಯಕತೆ ಇದೆ ಎಂದು ಹೇಳಿದ್ದಾಳೆ. ಬಳಿಕ, ಮೇಘನಾ, ವೃದ್ಧೆ ಮನೆಗೆ ತೆರಳಿ ಎರಡು ಖಾಲಿ ಚೆಕ್ ಮೇಲೆ ಸಹಿ ಮಾಡಿಸಿಕೊಂಡಿದ್ದಾಳೆ. ಜೊತೆಗೆ, ಒಂದಿಷ್ಟು ಕಾಗದ ಪತ್ರಗಳಿಗೂ ಸಹಿ ಪಡೆದಿದ್ದಾಳೆ. ಈ ವೇಳೆ, ಎಫ್ಡಿ ಬದಲಾಗಿ ಆರ್ಟಿಜಿಎಸ್ ಪತ್ರಕ್ಕೂ ಸಹಿ ಪಡೆದಿದ್ದಾಳೆ.

ಒಂದು ದಿನ ವೃದ್ಧ ದಂಪತಿ ಮಗ ಮೊಬೈಲ್ನಲ್ಲಿ ಖಾತೆ ಪರಿಶೀಲೀಸಿದಾಗ ಹಣ ಕಡಿಮೆ ಇರುವುದು ಪತ್ತೆಯಾಗಿದೆ. ಬಳಿಕ, ಬ್ಯಾಂಕ್ನಿಂದ ಬಂದಿದ್ದ ಮೆಸೆಜ್ಗಳ ಪರಿಶೀಲಿಸಿದ್ದಾರೆ. ಈ ವೇಳೆ ಫೆಬ್ರವರಿ 13 ರಂದು ಬೇರೆ ಖಾತೆಗೆ ಹಣ ವರ್ಗಾವಣೆಯಾಗಿರುವುದು ಗೊತ್ತಾಗಿದೆ. ನಂತರ ವೃದ್ಧೆ ಬ್ಯಾಂಕ್ಗೆ ಹೋಗಿ ಮೇಘಾಳನ್ನು ಪ್ರಶ್ನಿಸಿದಾಗ, “ನೀವು ಹೇಳಿದ ಖಾತೆಗೆ ಆರ್ಟಿಜಿಎಸ್ ಮಾಡಲಾಗಿದೆ” ಎಂದು ಹೇಳಿದ್ದಾಳೆ.

ವೃದ್ಧೆ, ಗಿರಿನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಅಸಲಿ ಸತ್ಯ ಬಾಯಿಬಿಟ್ಟಿದ್ದಾರೆ.

ಮೇಘನಾ ಐಷಾರಾಮಿ ಜೀವನದ ಕನಸು ಕಂಡಿದ್ದಳು. ಕಾರು ಖರೀದಿಸಿ ವೈಭೋಗದ ಜೀವನ ನಡೆಸಬೇಕು ಅಂದುಕೊಂಡಿದ್ದಳು. ಅದಕ್ಕಾಗಿ ಗಂಡ ಶಿವಪ್ರಸಾದ್ ಜೊತೆಗೆ ಸೇರಿ ವೃದ್ಧೆ ಖಾತೆಯಲ್ಲಿ ಹಣವನ್ನು ಎಗರಿಸಲು ಪ್ಲಾನ್ ಮಾಡಿದ್ದಾಳೆ. ಗೆಳೆಯ ವರದರಾಜು ಮತ್ತು ಅನ್ವರ್ ಘೋಷ್ಗೆ ಹೇಳಿ ಹೊಸ ಬ್ಯಾಂಕ್ ಖಾತೆ ತೆರದಿದ್ದಾಳೆ. ಆ ಖಾತೆಗೆ ಆರ್ಟಿಜಿಎಸ್ ಮೂಲಕ 50 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾಳೆ. ಬಳಿಕ, 30 ಲಕ್ಷ ಹಣ ವಿತ್ ಡ್ರಾ ಮಾಡಿಕೊಂಡಿದ್ದಾರೆ. ತನಿಖೆ ನಡೆಸಿ ಒಟ್ಟು 50 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!