
ಹರಿಯಾಣದ ಫರಿದಾಬಾದ್‌ನ ಎನ್‌ಐಟಿ ಪ್ರದೇಶದ ದಬುವಾ ಕಾಲೋನಿಯ ಮನೆಯೊಂದರಲ್ಲಿ ಅಪರೂಪದ ಘಟನೆ ನಡೆದಿದೆ. ಬುಧವಾರದಂದು ಒಂದು ಗೂಳಿ ಮತ್ತು ಹಸು ಆ ಮನೆಯ ಬೆಡ್ ರೂಮ್‌ಗೆ ನುಗ್ಗಿವೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆ ಸಂಭವಿಸಿದಾಗ ಮನೆಯಲ್ಲಿ ಇದ್ದ ಮಹಿಳೆ ಆತಂಕಗೊಂಡು ತನ್ನ ಸುರಕ್ಷತೆಗಾಗಿ ಒಂದು ಗಂಟೆಗೂ ಹೆಚ್ಚು ಕಾಲ ಅಲ್ಮೆರಾದ ಹಿಂದೆ ಅಡಗಿಕೊಂಡಿದ್ದಳು. ಈ ಸಂಗತಿ ತಿಳಿದ ನೆರೆಹೊರೆಯವರು ಮನೆಗೆ ನುಗ್ಗಿದ ಎರಡು ಪ್ರಾಣಿಗಳನ್ನು ಓಡಿಸಲು ಶ್ರಮಿಸಿದರು. ಆದರೆ ಸುಮಾರು ಒಂದು ಗಂಟೆ ಕಾಲ ಬೆಡ್ ರೂಮ್‌ನಲ್ಲೇ ಉಳಿದ ಹಸು ಮತ್ತು ಗೂಳಿ ಜನರು ಕೋಲುಗಳೊಂದಿಗೆ ಕೋಣೆಗೆ ಪ್ರವೇಶಿಸಿ ಓಡಿಸಿದಾಗ ಹೊರಬಂದಿವೆ.
ಮನೆಯ ಮಾಲೀಕ ರಾಕೇಶ್ ಸಾಹು ಹೇಳುವ ಪ್ರಕಾರ, ಬೆಳಿಗ್ಗೆ 10 ಗಂಟೆ ಸುಮಾರಿಗೆ ಮನೆಯ ಎಲ್ಲ ಸದಸ್ಯರು ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ರಾಕೇಶ್ ಮನೆ ಶುಚಿಗೊಳಿಸುವ ಕೆಲಸದಲ್ಲಿದ್ದರು. ಈ ವೇಳೆ ಒಂದು ಹಸು ನೇರವಾಗಿ ಅವರ ಮಲಗುವ ಕೋಣೆಗೆ ಓಡಿಬಂದಿತು, ತಕ್ಷಣವೇ ಗೂಳಿಯೊಂದು ಅದನ್ನು ಹಿಂಬಾಲಿಸಿತು. ಮನೆಯಲ್ಲಿದ್ದವರು ನೋಡ ನೋಡುತ್ತಿದ್ದಂತೆ ಗೂಳಿ ಹಾಸಿಗೆಯ ಮೇಲೆ ಹತ್ತಿದೆ. ಇದನ್ನು ಕಂಡ ಕುಟುಂಬ ಸದಸ್ಯರು ಭಯಭೀತರಾದರು.
ಪ್ರಾಣಿಗಳನ್ನು ಓಡಿಸಲು ತುಂಬಾ ಶ್ರಮಿಸಬೇಕಾಯ್ತು. ಹಲವು ಪ್ರಯತ್ನಗಳ ನಂತರವೂ ಅವು ಹೊರಗೆ ಬರದಿದ್ದಾಗ, ಪಟಾಕಿಗಳನ್ನು ಸಿಡಿಸಲಾಯಿತು. ಜೊತೆಗೆ ನೀರು ಎರಚಿ, ಕೋಲುಗಳಿಂದ ಓಡಿಸಲಾಯ್ತು ಎಂದು ರಾಕೇಶ್ ಹೇಳಿಕೊಂಡಿದ್ದಾರೆ.






