
ಉಡುಪಿ, ಮಾರ್ಚ್ 28: ಓರ್ವ ಮುಸ್ಲಿಂ (Muslim) ಯುವಕ ನನ್ನ ಮಗಳನ್ನು ಅಪಹರಿಸಿದ್ದಾನೆ. ಇದು ಲವ್ ಜಿಹಾದ್ (Love Jihad) ಷಡ್ಯಂತ್ರವಾಗಿದೆ ಎಂದು ಅಪಹರಣಕ್ಕೆ ಒಳಗಾದ ಯುವತಿಯ ತಂದೆ ಗಾಡ್ವಿನ್ ದೇವದಾಸ್ ಆರೋಪಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ( Udupi Police Station ) ಗಾಡ್ವಿನ್ ದೇವದಾಸ್ ದೂರು ದಾಖಲಿಸಿದ್ದಾರೆ.
ಉಡುಪಿಯ ಕರಂಬಳ್ಳಿ ನಿವಾಸಿ ಮೊಹಮ್ಮದ್ ಅಕ್ರಮ್ ಎಂಬವನು ನನ್ನ ಮಗಳನ್ನು ಅಪಹರಿಸಿದ್ದಾನೆ ಎಂದು ಗಾಡ್ವಿನ್ ದೇವದಾಸ್ ದೂರು ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಂತೆ ಮೊಹಮ್ಮದ್ ಅಕ್ರಮ್ ಉಡುಪಿ (Udupi) ಉಪ ನೊಂದಾವಣಿ ಕಚೇರಿಯಲ್ಲಿ ವಿಶೇಷ ವಿವಾಹದಡಿ ಅರ್ಜಿ ಸಲ್ಲಿಸಿದ್ದಾರೆ.
ಯುವತಿ ಕ್ರೈಸ್ತ ಧರ್ಮಕ್ಕೆ ಸೇರಿದವರಾಗಿದ್ದು, ಕಾಲೇಜಿನಿಂದ ವಾಪಸು ಮನೆಗೆ ತೆರಳುವಾಗ ಅಪಹರಿಸಲಾಗಿದೆ ಎನ್ನಲಾಗಿದೆ. ಗಾಡ್ವಿನ್ ದೇವದಾಸ್ ಈ ಹಿಂದೆ ಅಕ್ರಮ್ ಮೊಹಮ್ಮದ್ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದರು. ಈ ಸೇಡು ತೀರಿಸಿಕೊಳ್ಳಲು ಅಕ್ರಮ್ ಮೊಹಮ್ಮದ್ ನನ್ನ ಮಗಳನ್ನು ಅಪಹರಿಸಿ, ಬೆದರಿಸಿ ವಿವಾಹ ನೊಂದಣಿಗೆ ಸಹಿ ಹಾಕಿಸಿದ್ದಾನೆ ಎಂದು ದಾಖಲಿಸಿದ್ದಾರೆ.
ಅಕ್ರಂ ಡ್ರಗ್ಸ್ ವ್ಯಸನಿ ಆತನಿಗೆ ಯಾವುದೇ ಉದ್ಯೋಗವಿಲ್ಲ ನಾವು ಮಗಳನ್ನು ಕಳುಹಿಸುವುದಿಲ್ಲ. ಮುಸ್ಲಿಮರು ಎಲ್ಲರೂ ಕೆಟ್ಟವರೆಂದು ಹೇಳುವುದಿಲ್ಲ. ಹಬ್ಬದ ಸಂದರ್ಭದಲ್ಲಿ ಹೀಗೆ ಮಾಡಬಹುದಾ? ಸಭ್ಯ ಹುಡುಗನಾಗಿದ್ದರೆ ನಮ್ಮದು ಯಾವುದೇ ತಕರಾರು ಇರಲಿಲ್ಲ. ಕಳೆದ ಐದು ವರ್ಷಗಳಿಂದ ಮಗಳಿಗೆ ನಿರಂತರವಾಗಿ ಕಿರುಕುಳ ನೀಡಿದ್ದಾನೆ. ಗೆಳೆಯರ ಜೊತೆ ಬೆರೆಯದಂತೆ ಮೊಹಮ್ಮದ್ ಅಕ್ರಂ ಒತ್ತಡ ಹೇರುತ್ತಿದ್ದನು” ಎಂದರು.






