

ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಮಹಿಳೆಯನ್ನು ಪ್ರೀತಿಸಿ ಮದುವೆಯಾದ ಯುವಕನೊಬ್ಬ ಆಕೆಯ ನಡವಳಿಕೆಯಿಂದ ಬೇಸತ್ತು ಆಕೆಯ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ ನಂತರ ಪೊಲೀಸರಿಗೆ ಶರಣಾಗಿರುವಂತಹ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ತುಮಕೂರು ಮೂಲದ ಪವಿತ್ರ (26) ಎಂದು ಗುರುತಿಸಲಾಗಿದೆ. ಬಿಳಿಕೆರೆಯ ಬೂಚ ಹಳ್ಳಿಯ ಎಳನೀರು ವ್ಯಾಪಾರಿ ಸಚಿನ್ (26) ಕೊಲೆ ಮಾಡಿದ ಪತಿ. ಈತ ಅಪ್ರಾಪ್ತ ಬಾಲಕನೊಂದಿಗೆ ಸೇರಿ ತನ್ನ ಪತ್ನಿಯನ್ನು ಹತ್ಯೆಗೈದಿದ್ದಾನೆ.
ಕಳೆದ ಆರು ತಿಂಗಳ ಹಿಂದಷ್ಟೇ ಸಚಿನ್‌ಗೆ ಪವಿತ್ರಾಳ ಪರಿಚಯವಾಗಿತ್ತು. ಆಗ ಆಕೆ ತನಗೆ ಯಾರೂ ಇಲ್ಲ, ನಾನು ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದುದಾಗಿ ನಂಬಿಸಿ ಸಚಿನ್ ಮನೆಯವರ ಸಮ್ಮುಖದಲ್ಲೇ ಸರಳವಾಗಿ ಮದುವೆಯಾಗಿದ್ದರು. ಆದರೆ ಕ್ರಮೇಣ ಇಬ್ಬರ ನಡುವೆ ಜಗಳಗಳು ಏರ್ಪಡುತ್ತಿತ್ತು. ಪತ್ನಿಯ ನಡವಳಿಕೆಯಿಂದ ಸಚಿನ್ ಬೇಸತ್ತಿದ್ದ.
ಸಚಿನ್ ನಿತ್ಯ ಮೈಸೂರಿನಿಂದ ಇನ್ಫೋಸಿಸ್‌ಗೆ ಪವಿತ್ರಾಳನ್ನು ಕರೆದೊಯ್ಯುತ್ತಿದ್ದ. ಆಕೆಯ ನಡವಳಿಕೆಯ ಮೇಲೆ ಆತನಿಗೆ ಅನುಮಾನಗಳು ಹುಟ್ಟಿಕೊಂಡಿತ್ತು. ಆಕೆಯ ಅಣ್ಣ ಎಂದು ಹೇಳಿಕೊಂಡಿದ್ದಾತನ ನಂಬರ್ ಪಡೆದ ಆತ ಕರೆ ಮಾಡಿದಾಗ ಆಕೆಗೆ ಮೊದಲೇ ಮದುವೆಯಾಗಿ ವಿಚ್ಛೇದನ ಆಗಿರುವುದು ತಿಳಿದು ಬಂದಿದೆ. ಆಕೆಯ ಬಳಿ ಇದ್ದ ಆಫಿಸ್ ಐಡಿ ಕೂಡಾ ನಕಲಿ ಎಂದು ಗೊತ್ತಾಗಿದೆ. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯೂ ಏರ್ಪಟ್ಟಿದೆ.
ಶುಕ್ರವಾರ ಇನ್ಫೋಸಿಸ್‌ಗೆ ಕರೆದೊಯ್ಯಲು ಮುಂದಾದಾಗ ಪವಿತ್ರಾ ಆರೋಗ್ಯ ಸರಿ ಇಲ್ಲ ಎಂದು ನೆಪ ಹೇಳಿದ್ದಾಳೆ. ನಂತರ ಹೇಗೋ ಪುಸಲಾಯಿಸಿ ಗೋಬಿ ತಿನ್ನಲು ಹೋಗೋಣ ಎಂದು ಹೇಳಿ ಕರೆದೊಯ್ದಿದ್ದಾನೆ. ದಾರಿ ಮಧ್ಯೆ ಬೈಕ್ ನಿಲ್ಲಿಸಿದ ಸಚಿನ್ ಅಪ್ರಾಪ್ತ ಬಾಲಕನೊಂದಿಗೆ ಸೇರಿ ಆಕೆಯ ಕುತ್ತಿಗೆಗೆ ಹಗ್ಗ ಬಿಗಿದು, ಸಾಯಿಸಿದ್ದಾನೆ. ನಂತರ ನೇರವಾಗಿ ಬಿಳಿಕೆರೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶವವನ್ನು ಕೆಆರ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ
