

ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಆಟವಾಡುತ್ತಿದ್ದ ಎಂಜಿನಿಯರ್ ವಿದ್ಯಾರ್ಥಿಯೊಬ್ಬ ಏಕಾಏಕಿ ಹೃದಯಾಘಾತದಿಂದ ಕುಸಿದು ಸಾವನ್ನಪ್ಪಿರುವಂತಹ ಶಾಕಿಂಗ್ ಘಟನೆ ತೆಲಂಗಾಣದ ಮೆಡ್ಚಲ್‌ನಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಖಮ್ಮಮ್ ಜಿಲ್ಲೆಯ ಮೂಲದ ವಿನಯ್ ಕುಮಾರ್ (21) ಎಂದು ಗುರುತಿಸಲಾಗಿದೆ.
ಯುವಕ ನಾಲ್ಕನೇ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ಶುಕ್ರವಾರ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಫೀಲ್ಡಿಂಗ್ ಮಾಡುತ್ತಿದ್ದ ವಿನಯ್ ಪಂದ್ಯದ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಆತನನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ವೈದ್ಯರು ಹೃದಯಾಘಾತದಿಂದ ಯುವಕ ಸಾವನ್ನಪ್ಪಿರುವುದಾಗಿ ಶಂಕಿಸಿದ್ದಾರೆ. ಆತನ ಸಾವಿನ ಬಗ್ಗೆ ಕುಟುಂಬವು ಕೂಡಾ ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
