



ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕೌಟುಂಬಿಕ ಕಲಹದಿಂದ ಬೇಸತ್ತು ಸಾವಿಗೀಡಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 40 ವರ್ಷದ ಪ್ರಶಾಂತ್ ನಾಯರ್ ಸಾವಿಗೆ ಶರಣಾದ ವ್ಯಕ್ತಿ. ಪ್ರಶಾಂತ್ ನಾಯರ್ ಹಾಗೂ ಪತ್ನಿ ಪೂಜಾ ನಾಯರ್ ಅವರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು.
ಈ ದಂಪತಿಗೆ 8 ವರ್ಷ ಮಗಳೊಬ್ಬಳಿದ್ದಾಳೆ. 12 ವರ್ಷದ ಹಿಂದೆ ಪ್ರಶಾಂತ್ ನಾಯರ್ ಹಾಗೂ ಪೂಜಾ ನಾಯರ್ ಮದುವೆಯಾಗಿದ್ದು, ಕೌಟುಂಬಿಕ ಕಲಹದ ಕಾರಣಕ್ಕೆ ವರ್ಷದ ಹಿಂದೆ ಪರಸ್ಪರ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಇವರ ಪತ್ನಿ ಪೂಜಾ ನಾಯರ್ ಕೂಡ ಮತ್ತೊಂದು ಬಹುರಾಷ್ಟ್ರೀಯ ಕಂಪನಿಯಲ್ಲಿ ಹಿರಿಯ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು.
ಆದರೆ ಈ ಪ್ರಕರಣದಲ್ಲಿ ಯಾವುದೇ ಡೆತ್‌ನೋಟ್ ಸಿಕ್ಕಿಲ್ಲ, ಹಾಗೂ ಪತ್ನಿ ಕಡೆಯಿಂದ ಕೌಟುಂಬಿಕ ಕಿರುಕುಳ ನೀಡಿದಂತಹ ಯಾವುದೇ ಆರೋಪ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ. ಬೆಂಗಳೂರು ಉತ್ತರ ಡೆಪ್ಯೂಟಿ ಕಮೀಷನರ್ ಸಿದುಲು ಅದ್ವೈತ್ ಈ ಬಗ್ಗೆ ಪ್ರತಿಕ್ರಿಯಿ ನೀಡಿದ್ದು, ಪ್ರಶಾಂತ್ ನಾಯರ್ ಹಾಗೂ ಪತ್ನಿ ವರ್ಷದ ಹಿಂದೆ ದೂರಾಗಿದ್ದರು. ಪತ್ನಿಯಿಂದ ಕಿರುಕುಳ ನೀಡಿದ ಬಗ್ಗೆ ಯಾವುದೇ ಆರೋಪ ಇಲ್ಲ ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರಶಾಂತ್ ನಾಯರ್ ಅವರ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ, ಅವರ ಮಗ ಮತ್ತು ಸೊಸೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಶುಕ್ರವಾರ ಪ್ರಶಾಂತ್ ನಾಯರ್ ಅವರು ತಮ್ಮ ದೂರಾದ ಪತ್ನಿಯೊಂದಿಗೆ ಜಗಳವಾಡಿದ್ದರು, ಇದಾದ ನಂತರ ಅವರ ತಂದೆ ಫೋನ್ ಮೂಲಕ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಪುತ್ರ ತನ್ನ ಕರೆಗಳಿಗೆ ಉತ್ತರಿಸದ ಕಾರಣ, ಅವರು ಮಗ ಇರುವ ಮನೆಗೆ ಬಂದು ತಲುಪಿದಾಗ ಮಗ ಪ್ರಶಾಂತ್ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಕೌಟುಂಬಿಕವಾಗಿ ನೆಮ್ಮದಿ ಇಲ್ಲದ ಕಾರಣ ತಮ್ಮ ಪುತ್ರ ಬಹಳ ಖಿನ್ನತೆಗೆ ಒಳಗಾಗಿದ್ದರು ಎಂದು ಪ್ರಶಾಂತ್ ಅವರ ತಂದೆ ಪೊಲೀಸರಿಗೆ ನೀಡಿದ ಮಾಹಿತಿಯಲ್ಲಿ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
