



ಕಳೆದ ವರ್ಷ ಗೋವಾದ ಹೋಟೆಲ್‌ನಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಕೊಲೆ ಮಾಡಿದ ಆರೋಪದ ಮೇಲೆ ಜೈಲು ಸೇರಿರುವ ಬೆಂಗಳೂರು ಮೂಲದ ಟೆಕ್ ಕನ್ಸಲ್ಟೆನ್ಸಿಯ ಸಿಇಒ ಸುಚನಾ ಸೇಠ್ ವಿರುದ್ಧ ಈಗ ಮತ್ತೊಂದು ಕೇಸ್ ದಾಖಲಾಗಿದೆ. ಮಂಗಳವಾರ ಗೋವಾದ ಕೇಂದ್ರ ಕಾರಾಗೃಹದಲ್ಲಿ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸುಚನಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಸೋಮವಾರ ಕೊಲ್ವಾಲೆಯ ಕೇಂದ್ರ ಕಾರಾಗೃಹದಲ್ಲಿರುವ ಮಹಿಳಾ ಬ್ಲಾಕ್ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಸೇಠ್, ಪೊಲೀಸ್ ಕಾನ್‌ಸ್ಟೆಬಲ್‌ನಿಂದ ಮಹಿಳಾ ಕೈದಿ ಬ್ಲಾಕ್‌ನ ಒಳಗಿನ ರಿಜಿಸ್ಟರ್ ಅನ್ನು ಅನುಮತಿಯಿಲ್ಲದೆ ತೆಗೆದುಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದಕ್ಕೆ ಸೇಠ್ ದೂರುದಾರರನ್ನು ಅಸಭ್ಯ ಪದಗಳಿಂದ ನಿಂದಿಸಿದ್ದಾಳೆ. ಮತ್ತು ಅವರನ್ನು ಹೊಡೆದು, ತಳ್ಳಿ, ಕೂದಲನ್ನು ಎಳೆದಾಡಿ ದೈಹಿಕವಾಗಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕೊಲ್ವಾಲೆ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ನ ಸೆಕ್ಷನ್ 121 (1) (ಸಾರ್ವಜನಿಕ ಸೇವಕಿ ಕರ್ತವ್ಯ ನಿರ್ವಹಿಸದಂತೆ ತಡೆಯಲು ಸ್ವಯಂಪ್ರೇರಣೆಯಿಂದ ನೋವುಂಟುಮಾಡುವುದು ಅಥವಾ ಗಂಭೀರವಾದ ಗಾಯವನ್ನುಂಟುಮಾಡುವುದು) ಮತ್ತು 352 (ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
2024 ರ ಜನವರಿ 6 ರಂದು ಸೇಠ್ ತನ್ನ ಮಗನೊಂದಿಗೆ ಗೋವಾಗೆ ತೆರಳಿ, ಅಲ್ಲಿ ಆಕೆ ತನ್ನ ಮಗನನ್ನು ಕೊಂದು, ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಬೆಂಗಳೂರಿಗೆ ಕ್ಯಾಬ್ ಮೂಲಕ ವಾಪಸಾಗಲು ಪ್ರಯತ್ನಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಳು.
