
ಮಂಗಳೂರು, ಮಾ.10: ಕಾವೂರು ಠಾಣಾ ವ್ಯಾಪ್ತಿಯ ಉಲ್ಲಾಸ್ ನಗರದಲ್ಲಿ ನಡೆದ ಮನೆಕಳ್ಳತನ ಪ್ರಕರಣವನ್ನು ಕಾವೂರು ಪೊಲೀಸರು ಕೇವಲ 24 ಗಂಟೆಯಲ್ಲಿ ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಮಾ.7ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಮನೆಯವರು ಹೊರಗಿದ್ದ ವೇಳೆ ಅಪರಿಚಿತರು ಮನೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿ, ಸುಮಾರು ₹4.80 ಲಕ್ಷ ಮೌಲ್ಯದ 39 ಗ್ರಾಂ ಚಿನ್ನಾಭರಣ ಹಾಗೂ 182 ಗ್ರಾಂ ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದರು. ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ಪತ್ತೆ ತಂಡ ರಚಿಸಿ ಕಾರ್ಯಾಚರಣೆ ನಡೆಸಿ, ಮಾ.8ರಂದು ಅಶೋಕ್ (41), ದೇರಾಜೆ ಮನೆ, ಸಜೀಪನಡು ನಿವಾಸಿಯನ್ನು ಬಂಧಿಸಿದರು. ಆರೋಪಿಯಿಂದ ಕಳವು ಮಾಡಿದ ಎಲ್ಲಾ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಕಾವೂರು ಠಾಣಾ ಪೊಲೀಸ್ ನಿರೀಕ್ಷಕ ರಾಘವೇಂದ್ರ ಎಂ. ಬೈಂದೂರು, ಉಪನಿರೀಕ್ಷಕ ಮಲ್ಲಿಕಾರ್ಜುನ ಬಿರಾದಾರ ಹಾಗೂ ಸಿಬ್ಬಂದಿಗಳಾದ ದಿನೇಶ್, ಮಾಲತೇಶ್, ನಾಗರಾಜ್ ಮತ್ತು ರಿಯಾಜ್ ಪಾಲ್ಗೊಂಡಿದ್ದರು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.









