
ಕಡಬ: ತಾಲೂಕಿನ ರಾಮಕುಂಜ ಗ್ರಾಮದ ಕಂಪ ಪ್ರದೇಶದಲ್ಲಿ ಬಾವಿ ಕಾಮಗಾರಿಯ ವೇಳೆ ಸ್ಪೋಟಕ ಬಳಸಿ ಕಲ್ಲು ಹುಡಿಮಾಡಿದ ಪರಿಣಾಮ ಸಮೀಪದ ಮನೆಯ ಕಟ್ಟಿಗೆ ಬಿರುಕು ಬಿದ್ದ ಘಟನೆ ವರದಿಯಾಗಿದೆ.
ಪ್ರಕರಣದ ಆರೋಪಿತ ಸೋಮಶೇಖರ್ ಅವರು ತಮ್ಮ ಜಮೀನಿನಲ್ಲಿ ಬಾವಿ ಕಾಮಗಾರಿ ನಡೆಸುತ್ತಿದ್ದು, ಕೋಡಿಂಬಾಳ ಗ್ರಾಮದ ಶಿವರಾಮ ಅವರಿಗೆ ಬಾವಿಯಲ್ಲಿದ್ದ ಕಲ್ಲು ತೆರವುಗೊಳಿಸುವ ಕೆಲಸ ವಹಿಸಿದ್ದರು. ಮಾರ್ಚ್ 8ರಂದು ಶಿವರಾಮ ಅವರು ಬಾವಿಯೊಳಗಿನ ಕಲ್ಲುಗಳನ್ನು ಸ್ಪೋಟಕ ಬಳಸಿ ಪುಡಿಮಾಡಲು ಸಿದ್ಧತೆ ನಡೆಸಿರುವುದು ತಿಳಿದುಬಂದಿದೆ.
ಸ್ಥಳೀಯ ನಿವಾಸಿಗಳು ಸಮೀಪದಲ್ಲೇ ಮನೆಗಳಿರುವುದರಿಂದ ಜೀವ ಹಾಗೂ ಆಸ್ತಿಗೆ ಹಾನಿಯಾಗುವ ಸಾಧ್ಯತೆ ಇರುವುದಾಗಿ ಎಚ್ಚರಿಸಿ ಸ್ಫೋಟ ನಡೆಸಬಾರದೆಂದು ಮನವಿ ಮಾಡಿದ್ದರು ಎನ್ನಲಾಗಿದೆ. ಆದಾಗ್ಯೂ, ಕೆಲವೇ ಹೊತ್ತಿನಲ್ಲಿ ಸ್ಪೋಟಕ ಬಳಸಿದ ಪರಿಣಾಮ ಸಮೀಪದ ಮನೆಯ ಕಟ್ಟಿಗೆ ಬಿರುಕು ಬಿದ್ದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಮಾರ್ಚ್ 8ರಂದು ಬಂದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ. 28/2026, ಕಲಂ 288, 3(5) ಬಿಎನ್‌ಎಸ್-2023 ಹಾಗೂ ಸ್ಪೋಟಕ ಕಾಯ್ದೆ 1884ರ ಕಲಂ 9(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.









