ಉಪ್ಪಿನಂಗಡಿ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 4,175 ಲೀಟರ್ ಡೀಸೆಲ್ ಅನ್ನು ಉಪ್ಪಿನಂಗಡಿ ಪೊಲೀಸರು ಪತ್ತೆಹಚ್ಚಿ ಪ್ರಕರಣ ದಾಖಲಿಸಿದ್ದಾರೆ.
ದಿನಾಂಕ 09-03-2026ರಂದು ರಾತ್ರಿ ಬೆಳ್ತಂಗಡಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕಿ ರೋಹಿಣಿ ಸಿ.ಕೆ. ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ, ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮುದಲ್ತಿಯಾರ್ ಎಂಬಲ್ಲಿನ ಸ್ಥಳಕ್ಕೆ ದಾಳಿ ನಡೆಸಲಾಯಿತು. ಉಪ್ಪಿನಂಗಡಿ ವೃತ್ತ ನಿರೀಕ್ಷಕ ಹಾಗೂ ಠಾಣಾಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಜಗದೀಶ್ (35) ಎಂಬಾತನ ಮನೆಯ ಸಮೀಪದ ಶೆಡ್‌ನಲ್ಲಿ ತಪಾಸಣೆ ನಡೆಸಿದರು.
ತಪಾಸಣೆಯ ವೇಳೆ ಸುಮಾರು 200 ಲೀಟರ್ ಸಾಮರ್ಥ್ಯದ 20 ಬ್ಯಾರೆಲ್‌ಗಳು ಹಾಗೂ 35 ಲೀಟರ್ ಸಾಮರ್ಥ್ಯದ 5 ಕ್ಯಾನ್‌ಗಳಲ್ಲಿ ಒಟ್ಟು ಸುಮಾರು 4,175 ಲೀಟರ್ ಡೀಸೆಲ್ ಸಂಗ್ರಹಿಸಿರುವುದು ಪತ್ತೆಯಾಯಿತು. ಅಲ್ಲದೆ, ಸ್ಥಳದಲ್ಲಿ ಖಾಲಿ ಬ್ಯಾರೆಲ್‌ಗಳು, ಖಾಲಿ ಕ್ಯಾನ್‌ಗಳು ಹಾಗೂ ಇತರೆ ಸಂಬಂಧಿತ ವಸ್ತುಗಳು ಸಹ ಪತ್ತೆಯಾಗಿವೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯವನ್ನು ರೂ. 3,50,000 ಎಂದು ಅಂದಾಜಿಸಲಾಗಿದೆ.
ಆರೋಪಿ ಜಗದೀಶ್ ಬಳಿ ವಿಚಾರಣೆ ನಡೆಸಿದಾಗ, ಯಾವುದೇ ಮಾನ್ಯ ಪರವಾನಿಗೆ ಇಲ್ಲದೆ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಡೀಸೆಲ್ ಅಕ್ರಮವಾಗಿ ಶೇಖರಿಸಿಟ್ಟಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 35/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 287 ಮತ್ತು 3(5), ಅಗತ್ಯ ವಸ್ತುಗಳ ಕಾಯ್ದೆ 1955ರ ಕಲಂ 3 ಮತ್ತು 7, ಪೆಟ್ರೋಲಿಯಂ ಕಾಯ್ದೆ 1934ರ ಕಲಂ 23ರಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!