ಪುತ್ತೂರು: ನಗರದ ಹೃದಯಭಾಗದಲ್ಲಿರುವ ಹಾಲಿ ಸರಕಾರಿ ಸಾರ್ವಜನಿಕ ಆಸ್ಪತ್ರೆಯ 5.16 ಎಕರೆ ಜಾಗದಲ್ಲೇ ಸುಸಜ್ಜಿತ 300 ಹಾಸಿಗೆ ಸಾಮರ್ಥ್ಯದ ಸರಕಾರಿ ಮೆಡಿಕಲ್ ಆಸ್ಪತ್ರೆ ನಿರ್ಮಿಸಬೇಕು ಎಂದು ಸರಕಾರಿ ಆಸ್ಪತ್ರೆಯ ರಕ್ಷಾ ಸಮಿತಿ ನಿಕಟಪೂರ್ವ ಸದಸ್ಯರು ಆಗ್ರಹಿಸಿದ್ದಾರೆ.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಫೀಕ್ ದರ್ಬೆ, ರಾಜೇಶ್ ಬನ್ನೂರು ಮತ್ತು ವಿದ್ಯಾ ಆರ್. ಗೌರಿ, ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಜನರಿಂದ ವ್ಯಾಪಕ ಬೇಡಿಕೆ ವ್ಯಕ್ತವಾಗಿತ್ತು. ಅದಕ್ಕೂ ಮೊದಲು, ಮಾಜಿ ಶಾಸಕ ಶಕುಂತಳಾ ಶೆಟ್ಟಿಯವರು ಬನ್ನೂರು ಗ್ರಾಮಪಂಚಾಯತ್ ವ್ಯಾಪ್ತಿಯ ಸೇಡಿಯಾಪುವಿನಲ್ಲಿ ಮೆಡಿಕಲ್ ಕಾಲೇಜಿಗಾಗಿ ಜಾಗ ಗುರುತಿಸಿ ಪ್ರಸ್ತಾವನೆ ಸಲ್ಲಿಸಿದ್ದರು ಎಂದು ತಿಳಿಸಿದರು.
ಪುತ್ತೂರಿನ ಜನರ ಬೇಡಿಕೆಯಂತೆ, ಕಳೆದ ಸಾಲಿನ ಶಾಸಕ ಸಂಜೀವ ಮಠಂದೂರು ಅವರು ಕೂಡ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ರಾಜ್ಯ ಆರೋಗ್ಯ ಇಲಾಖೆಯ ನಿಯಮಾನುಸಾರ ಮೆಡಿಕಲ್ ಕಾಲೇಜು ಸ್ಥಾಪನೆಗೆ ಕನಿಷ್ಠ 300 ಹಾಸಿಗೆಗಳ ಸರಕಾರಿ ಆಸ್ಪತ್ರೆ ಅಗತ್ಯವಿದ್ದು, ಇದಕ್ಕಾಗಿ ಐದು ಎಕರೆಗಿಂತ ಹೆಚ್ಚು ಜಾಗ ಬೇಕಾಗುತ್ತದೆ ಎಂಬ ಮಾಹಿತಿ ದೊರಕಿತ್ತು. ಈ ಹಿನ್ನೆಲೆ, ಆರಂಭದಲ್ಲಿ 2.5 ಎಕರೆ ಇದ್ದ ಹಾಲಿ ಆಸ್ಪತ್ರೆ ಜಾಗಕ್ಕೆ ಸುತ್ತಮುತ್ತಲಿನ ರಿಜಿಸ್ಟರ್ ಕಚೇರಿ, ತಾಲೂಕು ಕಚೇರಿ, ಕಾರಾಗೃಹ ಸೇರಿದಂತೆ ಇತರೆ ಸರಕಾರಿ ಜಾಗಗಳನ್ನು ಸೇರಿಸಿ ಒಟ್ಟು 5.16 ಎಕರೆ ಜಾಗವನ್ನು ಒದಗಿಸಿ 300 ಹಾಸಿಗೆಗಳ ಆಸ್ಪತ್ರೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದು ವಿವರಿಸಿದರು.
ಮೆಡಿಕಲ್ ಕಾಲೇಜು ಸೇಡಿಯಾಪುವಿನಲ್ಲಿ ಸ್ಥಾಪನೆಯಾಗಲಿ ಎಂಬ ಅಭಿಪ್ರಾಯವಿದ್ದರೂ, 300 ಹಾಸಿಗೆಗಳ ಸರಕಾರಿ ಆಸ್ಪತ್ರೆ ಮಾತ್ರ ನಗರದ ಮಧ್ಯಭಾಗದಲ್ಲೇ ನಿರ್ಮಾಣವಾಗಬೇಕು. ಸೇಡಿಯಾಪು ಪೇಟೆಯಿಂದ ದೂರವಾಗಿರುವುದರಿಂದ ಅಲ್ಲಿ ಆಸ್ಪತ್ರೆ ನಿರ್ಮಿಸಿದರೆ ಬಡ ಹಾಗೂ ಹೊರರೋಗಿಗಳಿಗೆ ಪ್ರಯಾಣದ ತೊಂದರೆ ಉಂಟಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
‘ಬೆಂಚ್ ಮಾರ್ಕ್’ ಶಕುಂತಳಾ ಶೆಟ್ಟಿಗೆ ಕ್ರೆಡಿಟ್
ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿಗಾಗಿ ಜಾಗ ಗುರುತಿಸುವಲ್ಲಿ ಮಾಜಿ ಶಾಸಕ ಶಕುಂತಳಾ ಶೆಟ್ಟಿಯವರ ಪಾತ್ರ ಮಹತ್ವದ್ದಾಗಿದೆ. ವೈದ್ಯಕೀಯ ಶಿಕ್ಷಣಕ್ಕೆ ಮೆಡಿಕಲ್ ಕಾಲೇಜು ಅನುಕೂಲವಾದರೆ, ನಗರದ ಆಸ್ಪತ್ರೆಯ ಉನ್ನತೀಕರಣವು ಬಡ ರೋಗಿಗಳಿಗೆ ನೆರವಾಗುತ್ತದೆ. ಆದ್ದರಿಂದ ನಗರದಲ್ಲಿನ ಅನುಕೂಲಕರ ಹಾಗೂ ವಿಶಾಲ ಜಾಗದಲ್ಲೇ ಹಂತ ಹಂತವಾಗಿ 300 ಹಾಸಿಗೆಗಳ ಆಸ್ಪತ್ರೆ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎಂದು ರಾಜೇಶ್ ಬನ್ನೂರು ಅಭಿಪ್ರಾಯಪಟ್ಟರು.
ಸೇಡಿಯಾಪುವಿನಲ್ಲಿ ಜಾಗ ವಿವಾದ
ಸೇಡಿಯಾಪುವಿನಲ್ಲಿ ಗುರುತಿಸಿರುವ ಜಾಗದಲ್ಲಿ 19–20 ಎಕರೆ ಪ್ರದೇಶ ರಕ್ಷಿತಾರಣ್ಯಕ್ಕೆ ಸೇರಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಆ ಜಾಗವನ್ನು ಬಳಸಬೇಕಾದರೆ ಬದಲಾಗಿ ಬೇರೆಡೆ ಸಮಾನ ಪ್ರಮಾಣದ ಜಾಗವನ್ನು ರಕ್ಷಿತಾರಣ್ಯವಾಗಿ ನೀಡಬೇಕಿದೆ. ಈ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜಿಗೆ ಅನುಮೋದನೆ ದೊರೆತಿದ್ದರೂ ಅನುದಾನ ಮೀಸಲಾಗಿಲ್ಲ ಎಂದು ರಫೀಕ್ ದರ್ಬೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ., ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!