
ಪುತ್ತೂರು, ಮಾ.11: ಕಾರ್ಯಕ್ರಮಗಳಿಗೆ ಸಮಯ ಮಿತಿ ವಿಧಿಸುವ ವಿಚಾರದಲ್ಲಿ ಪೊಲೀಸರು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ನೆಲ್ಲಿಕಟ್ಟೆ ಮಿತ್ರ ಮಂಡಲದ ಪದಾಧಿಕಾರಿಗಳ ಸಭೆಯಲ್ಲಿ ಆರೋಪ ವ್ಯಕ್ತವಾಯಿತು.
ನೆಲ್ಲಿಕಟ್ಟೆ ಮಿತ್ರ ಮಂಡಲದ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿ, ಪೊಲೀಸರ ಕ್ರಮಕ್ಕೆ ಖಂಡನೆ ವ್ಯಕ್ತಪಡಿಸಲಾಯಿತು.
ಕಳೆದ ಫೆಬ್ರವರಿಯಲ್ಲಿ ನಡೆದ ನೆಲ್ಲಿಕಟ್ಟೆ ಮಿತ್ರ ಮಂಡಲದ 50ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಸಮಯ ಮಿತಿ ನೆಪವೊಡ್ಡಿ ರಾತ್ರಿ 10.30ರೊಳಗೆ ಸ್ಥಗಿತಗೊಳಿಸಲಾಗಿದ್ದು, ನಿಗದಿಪಡಿಸಿದ್ದ ಮನರಂಜನಾ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಲಿಲ್ಲ ಎಂದು ಪದಾಧಿಕಾರಿಗಳು ತಿಳಿಸಿದರು. ಕಾರ್ಯಕ್ರಮ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರೂ, ಯಾವುದೇ ಚರ್ಚೆಗೆ ಅವಕಾಶ ನೀಡದೆ ಪೊಲೀಸರು ಒತ್ತಡ ಹೇರಿ ಕಾರ್ಯಕ್ರಮ ನಿಲ್ಲಿಸಿದ ಪರಿಣಾಮ ಸದಸ್ಯರು ಹಾಗೂ ಸಾರ್ವಜನಿಕರಿಗೆ ನೋವುಂಟಾಗಿದೆ ಎಂದು ಆರೋಪಿಸಿದರು.
ಫೆಬ್ರವರಿ 1ರಂದು ನಡೆದ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಪ್ರಸ್ತುತ ಹೆಚ್ಚಿದ ತಾಪಮಾನವನ್ನು ಮನಗಂಡು ರಾತ್ರಿ ವೇಳೆ ಆಯೋಜಿಸಲಾಗಿತ್ತು. ಸಭಾ ಕಾರ್ಯಕ್ರಮದ ಜೊತೆಗೆ ರಸಮಂಜರಿ ಸೇರಿದಂತೆ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.
ಆದರೆ ಬಳಿಕ ತಾಲೂಕಿನ ವಿವಿಧೆಡೆ ಸಮಯ ಮೀರಿದ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ. ಇತ್ತೀಚೆಗೆ ಉಪ್ಪಿನಂಗಡಿಯಲ್ಲಿ ನಡೆದ ‘ಉಬರ್ ಉತ್ಸವ’ ತಡರಾತ್ರಿವರೆಗೂ ನಡೆದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಭೆಯಲ್ಲಿ ಪ್ರಶ್ನಿಸಲಾಯಿತು. ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕಾದರೆ, ನೆಲ್ಲಿಕಟ್ಟೆ ಮಿತ್ರ ಮಂಡಲದ ಕಾರ್ಯಕ್ರಮದ ಮೇಲಷ್ಟೇ ಕಟ್ಟುನಿಟ್ಟಿನ ಕ್ರಮ ಯಾಕೆ ಎನ್ನುವ ಪ್ರಶ್ನೆ ಸದಸ್ಯರಿಂದ ಕೇಳಿಬಂತು.
ಈ ವಿಷಯವನ್ನು ಮೇಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ತಾರತಮ್ಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಆಗ್ರಹ ವ್ಯಕ್ತವಾಯಿತು.
ಸಭೆಯಲ್ಲಿ ಮಾಜಿ ಪುರಸಭಾಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ನಗರಸಭೆಯ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಜನಾರ್ದನ ರಾವ್, ಸಂದೀಪ್ ನೆಲ್ಲಿಕಟ್ಟೆ, ರೋಹಿತ್ ನೆಲ್ಲಿಕಟ್ಟೆ, ದೇವಿಪ್ರಸಾದ್ ಶೆಟ್ಟಿ, ಶಶಿಕಾಂತ್ ರಾವ್, ಜಗನ್ನಾಥ ಜೋಗಿ, ಬಾಲಕೃಷ್ಣ ನಾಯ್, ನಿಖಿಲ್ ನಾಯ್,ಅಶ್ರಫ್ -ಕಟ್ಲೆರಿ ವಿಲಿಯಂ, ಅಭಿಲಾಷ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.









