
ಪುತ್ತೂರು, ಮಾ.11: ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ನಡೆದಿರುವುದನ್ನು ವಿರೋಧಿಸಿ ಬಿಜೆಪಿ ಮಹಿಳಾ ಮೋರ್ಚಾ ನಗರ ಮಂಡಲದಿಂದ ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.
ದ.ಕ ಜಿಲ್ಲಾ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ವತಿಯಿಂದ ಮಾ.8ರಂದು ದೇವಸ್ಥಾನದ ಆವರಣದಲ್ಲಿರುವ ನಟರಾಜ ವೇದಿಕೆಯಲ್ಲಿ ಮಹಿಳಾ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿತ್ತು. ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿರುವ ದೇವಸ್ಥಾನದ ಆಸ್ತಿಯನ್ನು ರಾಜಕೀಯ ಉದ್ದೇಶಗಳಿಗೆ ಬಳಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
Karnataka Hindu Religious Institutions and Charitable Endowments Act, 1997ರ ಪ್ರಕಾರ ದೇವಸ್ಥಾನದ ಆಸ್ತಿ, ಹಾಲ್, ಕಟ್ಟಡಗಳು ಹಾಗೂ ಇತರೆ ಸೌಕರ್ಯಗಳನ್ನು ಧಾರ್ಮಿಕ ಉದ್ದೇಶಗಳಿಗೆ ಮಾತ್ರ ಬಳಸಬೇಕೆಂದು ಕಾನೂನು ಸ್ಪಷ್ಟಪಡಿಸಿದೆ. ವಿಶೇಷವಾಗಿ ಕಲಂ 63ರ ಅನ್ವಯ ದೇವಸ್ಥಾನದ ಆಸ್ತಿಗಳ ಬಳಕೆ ಧಾರ್ಮಿಕ ಉದ್ದೇಶಗಳಿಗೆ ಸೀಮಿತವಾಗಿರಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೇವಸ್ಥಾನದ ಪವಿತ್ರ ಆವರಣದಲ್ಲಿ ರಾಜಕೀಯ ಚಟುವಟಿಕೆ ನಡೆಸಿರುವುದು ಧಾರ್ಮಿಕ ಸ್ವರೂಪಕ್ಕೆ ಧಕ್ಕೆ ತರುವಂತದ್ದು. ಕಾರ್ಯಕ್ರಮದಲ್ಲಿ ಅನ್ಯಧರ್ಮೀಯರು ಭಾಗವಹಿಸಿರುವುದರಿಂದ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಈ ಕುರಿತು ತಕ್ಷಣ ತನಿಖೆ ನಡೆಸಿ, ದೇವಸ್ಥಾನದ ಆಸ್ತಿಯನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ದೇವಸ್ಥಾನದ ಆಸ್ತಿಯನ್ನು ರಾಜಕೀಯ ಕಾರ್ಯಕ್ರಮಗಳಿಗೆ ಬಳಸುವುದನ್ನು ನಿಷೇಧಿಸುವಂತೆ ಸೂಚನೆ ನೀಡಬೇಕು. ಕೈಗೊಂಡ ಕ್ರಮಗಳ ಕುರಿತು 7 ದಿನಗಳೊಳಗೆ ಲಿಖಿತ ಉತ್ತರ ನೀಡುವಂತೆ ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿದ್ಯಾ ಆರ್ ಗೌರಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ವರ್ಣಲತಾ ಹೆಗಡೆ, ಕಾರ್ಯದರ್ಶಿ ಜಯಲಕ್ಷ್ಮಿ, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ., ಪ್ರಧಾನ ಕಾರ್ಯದರ್ಶಿ ಶಶಿಧರ್ ನಾಯಕ್, ಓಬಿಸಿ ಮೋರ್ಚಾ ಅಧ್ಯಕ್ಷ ನಿರಂಜನ್ ಮಾನ್ಯ, ಶಕ್ತಿಕೇಂದ್ರ ಅಧ್ಯಕ್ಷ ನಾಗೇಂದ್ರ ಬಾಳಿಗ, ಗ್ರಾಮಾಂತರ ಮಂಡಲ ಉಪಾಧ್ಯಕ್ಷ ನಾಗೇಶ್ ಹಾಗೂ ಕಾರ್ಯಕರ್ತ ರವಿ ಉಪಸ್ಥಿತರಿದ್ದರು.









