
ಅಮೆರಿಕ ಮತ್ತು ಚೀನಾ ನಡುವಿನ ಸುಂಕ ಯುದ್ಧ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಮೆರಿಕದ 145% ಸುಂಕಕ್ಕೆ ಪ್ರತಿಕ್ರಿಯೆಯಾಗಿ, ಚೀನಾ ಶುಕ್ರವಾರ ತನ್ನ ಸುಂಕವನ್ನು 125% ಏರಿಕೆ ಮಾಡುವುದಾಗಿ ಘೋಷಣೆ ಮಾಡಿದ್ದು, ಇದು ಶನಿವಾರದಿದ ಜಾರಿಗೆ ಬರಲಿದೆ.
ಅದರೊಂದಿಗೆ ಅಮೆರಿಕ ಇನ್ನು ವಿಧಿಸುವ ಯಾವುದೇ ಹೆಚ್ಚುವರಿ ಸುಂಕಕ್ಕೆ ಈಗ ಪ್ರತಿಕ್ರಿಯಿಸುವುದಿಲ್ಲ ಎಂದು ಚೀನಾ ಹೇಳಿದೆ.
ಅಮೆರಿಕ ವಿಧಿಸಿರುವ ಅಸಹಜ ಸುಂಕಗಳು ಅಂತರರಾಷ್ಟ್ರೀಯ ಆರ್ಥಿಕ ಮತ್ತು ವ್ಯಾಪಾರ ನಿಯಮಗಳನ್ನು ಗಂಭೀರವಾಗಿ ಉಲ್ಲಂಘಿಸುತ್ತವೆ ಎಂದು ಚೀನಾ ಹೇಳಿದೆ. ಇದು ಒತ್ತಡ ಮತ್ತು ಬೆದರಿಕೆಯ ಸಂಪೂರ್ಣ ಏಕಪಕ್ಷೀಯ ನೀತಿಯಾಗಿದೆ.
ಚೀನಾ ಯಾರಿಗೂ ಹೆದರುವುದಿಲ್ಲ ಎಂದ ಕ್ಸಿ ಜಿನ್‌ಪಿಂಗ್: ಅಮೆರಿಕದೊಂದಿಗಿನ ಹೆಚ್ಚುತ್ತಿರುವ ಸುಂಕ ವಿವಾದದ ಮಧ್ಯೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತಮ್ಮ ಮೊದಲ ಹೇಳಿಕೆ ನೀಡಿದ್ದಾರೆ. ಚೀನಾ ಯಾರಿಗೂ ಹೆದರುವುದಿಲ್ಲ ಎಂದು ಅವರು ಹೇಳಿದರು. ಕಳೆದ 70 ವರ್ಷಗಳಲ್ಲಿ ಚೀನಾದ ಅಭಿವೃದ್ಧಿಯು ಕಠಿಣ ಪರಿಶ್ರಮ ಮತ್ತು ಸ್ವಾವಲಂಬನೆಯ ಫಲಿತಾಂಶವಾಗಿದೆ ಎಂದಿದ್ದಾರೆ.
ಚೀನಾ ಎಂದಿಗೂ ಇತರರ ದಾನವನ್ನು ಅವಲಂಬಿಸಿಲ್ಲ. ಯಾರೊಬ್ಬರ ಬಲವಂತಕ್ಕೂ ಅದು ಎಂದಿಗೂ ಹೆದರುವುದಿಲ್ಲ. ಜಗತ್ತು ಎಷ್ಟೇ ಬದಲಾದರೂ, ಚೀನಾ ತೊಂದರೆಗೊಳಗಾಗುವುದಿಲ್ಲ.
ಇದರಲ್ಲಿ ಯಾರಿಗೂ ಗೆಲುವು ಸಿಗೋದಿಲ್ಲ: ವ್ಯಾಪಾರ ಯುದ್ಧದಲ್ಲಿ ಯಾರೂ ವಿಜೇತರಲ್ಲ ಎಂದು ಜಿನ್‌ಪಿಂಗ್ ಹೇಳಿದರು. ಪ್ರಪಂಚದ ವಿರುದ್ಧ ಹೋಗುವುದು ಎಂದರೆ ನಿಮ್ಮ ವಿರುದ್ಧವೇ ಹೋಗುವುದು ಎಂದರ್ಥ.
ಸ್ಪ್ಯಾನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಅವರೊಂದಿಗಿನ ಸಭೆಯಲ್ಲಿ ಜಿನ್‌ಪಿಂಗ್ ಈ ಮಾತು ಹೇಳಿದ್ದಾರೆ. ಸ್ಯಾಂಚೆಜ್ ಶುಕ್ರವಾರ ಚೀನಾಕ್ಕೆ ದ್ವಿಪಕ್ಷೀಯ ಭೇಟಿಗಾಗಿ ಆಗಮಿಸಿದ್ದಾರೆ.
ಟ್ರಂಪ್ ಸುಂಕಗಳನ್ನು ಘೋಷಿಸಿದ ನಂತರ ಚೀನಾಕ್ಕೆ ಭೇಟಿ ನೀಡಿದ ಮೊದಲ ಯುರೋಪಿಯನ್ ನಾಯಕ ಸ್ಯಾಂಚೆಜ್. ಕಳೆದ 2 ವರ್ಷಗಳಲ್ಲಿ ಅವರು ಮೂರು ಬಾರಿ ಚೀನಾಕ್ಕೆ ಭೇಟಿ ನೀಡಿದ್ದಾರೆ. ಸುಂಕಗಳ ಬಗ್ಗೆ ಟ್ರಂಪ್ ಅವರನ್ನು ಸ್ಯಾಂಚೆಜ್ ಟೀಕಿಸಿದ್ದರು. ಏಪ್ರಿಲ್ 8 ರಂದು ಘೋಷಣೆ ಮಾಡಿದ ಟ್ರಂಪ್ ಅವರ ಸುಂಕಗಳು ಯುರೋಪ್ ಅನ್ನು ಹೊಸ ಮಾರುಕಟ್ಟೆಗಳನ್ನು ಹುಡುಕುವಂತೆ ಒತ್ತಾಯಿಸುತ್ತದೆ ಎಂದು ಹೇಳಿದರು. ಇದಲ್ಲದೆ, ಯುರೋಪಿಯನ್ ರಾಷ್ಟ್ರಗಳು ಮತ್ತು ಚೀನಾ ಎರಡೂ ತಮ್ಮ ಸಂಬಂಧಗಳನ್ನು ಸುಧಾರಿಸುವ ಬಗ್ಗೆ ಪರಿಗಣಿಸಿವೆ ಎಂದಿದ್ದಾರೆ.






