ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಸನ್‌ರೈಸರ್ಸ್ ಬೃಹತ್ ಗುರಿ ಚೇಸ್ ಮಾಡಿ ಅಬ್ಬರಿಸಿದೆ. ಇದು ಈ ಟೂರ್ನಿಯ ಅತಿದೊಡ್ಡ ಚೇಸ್ ಎಂಬ ದಾಖಲೆಯಾಗಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಟಾಪ್‌ ಆರ್ಡರ್ ಹಾಗೂ ಅಂತಿಮ ಹಂತದಲ್ಲಿ ಮಾರ್ಕಸ್ ಸ್ಟಾಯ್ನಿಸ್ ಅಬ್ಬರದಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 245 ರನ್ ಕಲೆಹಾಕಿ ಸನ್‌ರೈಸರ್ಸ್ ಹೈದರಾಬಾದ್‌ಗೆ 246 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು.

ಈ ಬೃಹತ್ ಗುರಿಯನ್ನು ಸನ್‌ರೈಸರ್ಸ್ ಹೈದರಾಬಾದ್ 171 ರನ್‌ಗಳ ಅಬ್ಬರದ ಓಪನಿಂಗ್ ಜತೆಯಾಟ, ಅದರಲ್ಲಿಯೂ ಅಭಿಷೇಕ್ ಶರ್ಮ ದಾಖಲೆಯ ಇನ್ನಿಂಗ್ಸ್‌ ನೆರವಿನಿಂದ 18.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 247 ರನ್ ಬಾರಿಸಿ ಇನ್ನೂ 9 ಎಸೆತ ಬಾಕಿ ಇರುವಾಗಲೇ 8 ವಿಕೆಟ್‌ಗಳ ಗೆಲುವು ದಾಖಲಿಸಿದೆ.

ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್: ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಪಂಜಾಬ್ ಕಿಂಗ್ಸ್ ಸನ್‌ರೈಸರ್ಸ್ ಹೈದರಾಬಾದ್‌ಗೆ ಬೃಹತ್ ರನ್ ಗುರಿ ನೀಡಲೇಬೇಕು ಎಂಬ ಮನಸ್ಥಿತಿಯಲ್ಲಿ ಬ್ಯಾಟಿಂಗ್ ನಡೆಸಿತು. ಕೇವಲ 4 ಓವರ್‌ಗಳಲ್ಲಿ ಆರಂಭಿಕರು 66 ರನ್ ಜತೆಯಾಟವನ್ನಾಡಿದರು. ಬಳಿಕ ಕಣಕ್ಕಿಳಿದ ಶ್ರೇಯಸ್ ಐಯ್ಯರ್ ಎಸ್‌ಆರ್‌ಎಚ್ ಬೌಲರ್‌ಗಳ ಬೆವರಿಳಿಸಿದರು. ತಂಡದ ಪರ ಪ್ರಿಯನ್ಶ್ ಆರ್ಯ 36 (13), ಪ್ರಭ್‌ಸಿಮ್ರಾನ್ ಸಿಂಗ್ 42 (23), ನಾಯಕ ಶ್ರೇಯಸ್ ಐಯ್ಯರ್ 36 ಎಸೆತಗಳಲ್ಲಿ 6 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 82 ರನ್, ನೆಹಲ್ ವಧೇರಾ 27 (22), ಶಶಾಂಕ್ ಸಿಂಗ್ 2 (3), ಗ್ಲೆನ್ ಮ್ಯಾಕ್ಸ್‌ವೆಲ್ 3 (7), ಮಾರ್ಕೊ ಯಾನ್ಸೆನ್ ಅಜೇಯ 5 ರನ್ ಹಾಗೂ ಕೊನೆಯ ನಾಲ್ಕು ಎಸೆತದಲ್ಲಿ ಸತತ ನಾಲ್ಕು ಸಿಕ್ಸರ್ ಸಿಡಿಸಿದ ಮಾರ್ಕಸ್ ಸ್ಟಾಯ್ನಿಸ್ 11 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 34 ರನ್ ಚಚ್ಚಿದರು.

ಸನ್‌ರೈಸರ್ಸ್ ಹೈದರಾಬಾದ್ ಪರ ಹರ್ಷಲ್ ಪಟೇಲ್ 4 ವಿಕೆಟ್ ಹಾಗೂ ಇಶಾನ್ ಮಲಿಂಗ ಎರಡು ವಿಕೆಟ್ ಪಡೆದರು.

ಸನ್‌ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್: ತಂಡದ ಪರ ಎಂದಿನಂತೆ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದರು. 12.2 ಓವರ್‌ಗಳಲ್ಲಿ ಬರೋಬ್ಬರಿ 171 ರನ್‌ಗಳ ಜತೆಯಾಟವಾಡಿದ ಈ ಜೋಡಿ ಪಂಜಾಬ್ ಕಿಂಗ್ಸ್ ಕೈನಿಂದ ಅಷ್ಟರಲ್ಲಾಗಲೇ ಪಂದ್ಯವನ್ನು ಕಸಿದುಕೊಂಡಿತ್ತು. ಹೆಡ್ 37 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 66 ರನ್ ಬಾರಿಸಿದರೆ, ಅಭಿಷೇಕ್ ಶರ್ಮಾ 55 ಎಸೆತಗಳಲ್ಲಿ 14 ಬೌಂಡರಿ ಹಾಗೂ 10 ಸಿಕ್ಸರ್ ಸಹಿತ 141 ರನ್‌ ಬಾರಿಸಿದರು. ಇನ್ನುಳಿದಂತೆ ಹೆನ್ರಿಚ್ ಕ್ಲಾಸೆನ್ ಅಜೇಯ 21 ರನ್ ಹಾಗೂ ಇಶಾನ್ ಕಿಶನ್ ಅಜೇಯ 9 ರನ್ ಗಳಿಸಿದರು.

ಪಂಜಾಬ್ ಕಿಂಗ್ಸ್ ಪರ ಯುಜ್ವೇಂದ್ರ ಚಹಲ್ ಹಾಗೂ ಅರ್ಷದೀಪ್ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದರು.

Leave a Reply

Your email address will not be published. Required fields are marked *

Join WhatsApp Group
error: Content is protected !!