



ಮು ಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಕೆಕೆಆರ್ ವಿರುದ್ಧ 16 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಚಹಾಲ್ ಅವರ ಮಾರಕ ದಾಳಿಗೆ ತತ್ತರಿಸಿದ ಕೆಕೆಆರ್ 95 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಕೆಟ್ಟ ದಾಖಲೆ ಮಾಡಿದೆ.
ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ಕೆಕೆಆರ್ ಬಿಗಿಯಾದ ಬೌಲಿಂಗ್ ದಾಳಿಗೆ ಸಿಲುಕಿ ತತ್ತರಿಸಿದ ಪಂಜಾಬ್ ಕಿಂಗ್ಸ್ 15.3 ಓವರ್ ಗಳಲ್ಲೇ 111 ರನ್ ಗಳಿಗೆ ಆಲೌಟ್ ಆಯಿತು. ಹರ್ಷಿತ್ ರಾಣಾ ಆರಂಭದಲ್ಲೇ 3 ವಿಕೆಟ್ ಪಡೆಯುವ ಮೂಲಕ ಪಂಜಾಗ್‌ಗೆ ದೊಡ್ಡ ಆಘಾತ ನೀಡಿದರು.
ಕೆಕೆಆರ್ ತಂಡದ ಮಾಜಿ ನಾಯಕ ಶ್ರೇಯಸ್ ಅಯ್ಯರ್ ಗೆ ಕೆಕೆಆರ್ ಬೌಲರ್ ಗಳು ಅವಕಾಶ ಕೊಡಲೇ ಇಲ್ಲ. ರನ್ ಗಳಿಸುವ ಮುನ್ನವೇ ಪಂಜಾಬ್ ಕಿಂಗ್ಸ್ ನಾಯಕನ ವಿಕೆಟ್ ಪಡೆದರು. ಪ್ರಿಯಾಂಶ್ ಆರ್ಯ 12 ಎಸೆತಗಳಲ್ಲಿ 22 ರನ್ ಗಳಿಸಿದರೆ, ಪ್ರಬ್‌ಸಿಮ್ರನ್ ಸಿಂಗ್ 15 ಎಸೆತಗಳಲ್ಲಿ 30 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ ಗಳು ರನ್ ಗಳಿಸಲು ತಡಕಾಡಿದರು. ಶಶಾಂಕ್ ಸಿಂಗ್ 18 ರನ್ ಗಳಿಸಿದರೆ, ನೇಹಲ್ ವಧೇರಾ 10 ರನ್ ಗಳಿಸಿದರು.
ವೈಭವ್ ಅರೋರ ಮತ್ತು ಆನ್ರಿಚ್ ನೋಕಿಯಾ ತಲಾ 1 ವಿಕೆಟ್ ಪಡೆದರು. ಹರ್ಷಿತ್ ರಾಣಾ 3 ವಿಕೆಟ್ ಪಡೆದು ಮಿಂಚಿದರು. ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದುಕೊಂಡರು.
ಚಹಾಲ್ ಅಬ್ಬರಕ್ಕೆ ತತ್ತರಿಸಿದ ಕೆಕೆಆರ್
112 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ಪಂಜಾಬ್ ಕಿಂಗ್ಸ್ ಬೌಲರ್ ಗಳ ಬಿಗಿಯಾಗ ಬೌಲಿಂಗ್‌ಗೆ ದಿಕ್ಕೆಟ್ಟಿತು. ಕ್ವಿಂಟನ್ ಡಿ ಕಾಕ್ 2 ರನ್ ಗಳಿಸಿ ಔಟಾದರೆ ಸುನಿಲ್ ನರೈನ್ 5 ರನ್ ಗಳಿಸಿ ಔಟಾದರು. ಬಳಿಕ ಜೊತೆಯಾದ ಆಂಗ್‌ಕ್ರಿಶ್ ರಘುವಂಶಿ ಮತ್ತು ಅಜಿಂಕ್ಯ ರಹಾನೆ 3ನೇ ವಿಕೆಟ್‌ಗೆ 55 ರನ್‌ಗಳನ್ನು ಕಲೆಹಾಕಿದರು. ಆದರೆ ರಹಾನೆ ಔಟಾಗುತ್ತಿದ್ದಂತೆ ಕೆಕೆಆರ್ ದಾರಿ ತಪ್ಪಿತು.
62 ರನ್‌ಗಳಿಗೆ 3ನೇ ವಿಕೆಟ್ ಬಿದ್ದರೆ 79 ರನ್‌ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಂಡ್ರೆ ರಸೆಲ್ 11 ಎಸೆತಗಳಲ್ಲಿ 17 ರನ್ ಗಳಿಸಿದರೂ ಮಾರ್ಕೊ ಯಾನ್ಸೆನ್ ಅವರ ಬೌಲಿಂಗ್‌ನಲ್ಲಿ ಬ್ಯಾಟ್‌ಗೆ ಬಡಿದ ಚೆಂಡು ವಿಕೆಟ್‌ಗೆ ಬಿದ್ದಿದ್ದರಿಂದ ಕೆಕೆಆರ್ 95 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಯುಜ್ವೇಂದ್ರ ಚಹಾಲ್ 4 ಓವರ್ ಗಳಲ್ಲಿ 28 ರನ್ ನೀಡಿ 4 ವಿಕೆಟ್ ಪಡೆದುಕೊಂಡರು.
17 ವರ್ಷಗಳ ದಾಖಲೆ ಉಡೀಸ್
2009ರಲ್ಲಿ ಸಿಎಸ್‌ಕೆ ತಂಡವು ಆರ್ ಸಿಬಿ ವಿರುದ್ಧ 116 ರನ್‌ಗಳನ್ನು ಡಿಫೆಂಡ್ ಮಾಡಿಕೊಂಡಿದ್ದು ಈವರೆಗಿನ ದಾಖಲೆಯಾಗಿತ್ತು. ಈಗ ಪಂಜಾಬ್ ಕಿಂಗ್ಸ್ 111 ರನ್‌ಗಳನ್ನು ಡಿಫೆಂಡ್ ಮಾಡಿಕೊಂಡು ಐಪಿಎಲ್‌ನಲ್ಲಿ ಅತಿ ಕಡಿಮೆ ಮೊತ್ತವನ್ನು ಡಿಫೆಂಡ್ ಮಾಡಿಕೊಂಡ ಸಾಧನೆ ಮಾಡಿದೆ.
