ಬಾಲಕಿ ಮೇಲೆ ಪೈಶಾಚಿಕ ಕೃತ್ಯ ಎಸಗಿದ ಹಂತಕನ ಎನ್‌ಕೌಂಟರ್ ಮಾಡಿರುವ ಪ್ರಕರಣಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ

ನಿನ್ನೆ ನಡೆದ ಹುಬ್ಬಳ್ಳಿಯ ಘಟನೆ ಕೇಳಿ ಇಡೀ ರಾಜ್ಯ ಆಕ್ರೋಶ ವ್ಯಕ್ತಪಡಿಸಿತ್ತು. ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ ಕಾಮುಕನ ಬಗ್ಗೆ ಜನರು ಬೀದಿಗೆ ಇಳಿದಿದ್ದರು.

ನಿಮ್ಮ ತನಿಖೆ ಬೇಡ, ಆತನನ್ನು ನಮ್ಮ ಕೈಗೆ ಕೊಡಿ ಆತನಿಗೆ ನಾವು ಶಿಕ್ಷೆ ನೀಡ್ತೀವಿ ಎಂದು ಜನರು ರೊಚ್ಚಿಗೆದ್ದಿದ್ದರು. ಪ್ರಕರಣ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಆತನನ್ನು ಬಂಧಿಸಲು ಹೋಗಿದ್ದ ವೇಳೆ, ಎನ್ ಕೌಂಟರ್ ಗೆ ಆತ ಬಲಿಯಾಗಿದ್ದಾನೆ. ಈಗ ಎನ್ ಕೌಂಟರ್ ಮಾಡಿದ ಪೊಲೀಸರ ಬಗ್ಗೆ ಜನರು ಹೆಮ್ಮೆ ಪಡುತ್ತಿದ್ದಾರೆ.

ಆರೋಪಿಯನ್ನು ಬಂಧಿಸಲು ಹೋಗಿದ್ದ ಸಂದರ್ಭದಲ್ಲಿ ಕಾಮುಕನು ಪೊಲೀಸರ ಮೇಲೆಯೇ ಕಲ್ಲು ಎಸೆದು ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಎಷ್ಟು ಹೇಳಿದರೂ ಆರೋಪಿ ಶರಣಾಗಿಲ್ಲ. ಪಿಎಸ್ ಐ ಅನ್ನಪೂರ್ಣ ಮುಕ್ಕಣ್ಣವರ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಆ ಗುಂಡು ಕಾಮುಕನ ಎದೆಗೆ ನಾಟಿ ಆತ ಬಲಿಯಾಗುವಂತೆ ಮಾಡಿದೆ. ಹೀಗಾಗಿ ಈಗ ಪೊಲೀಸರ ಈ ಕಾರ್ಯಕ್ಕೆ ಜನರು ಮೆಚ್ಚುಗೆಯ ಮಾತುಗಳನ್ನು ಹೇಳುತ್ತಿದ್ದಾರೆ.

ಗುಂಡು ಹಾರಿಸಿದ ಪಿಎಸ್ ಐ ಯಾರು?
2018ರ ಬ್ಯಾಚ್‌ ನ ಪಿಎಸ್‌ ಐ ಅನ್ನಪೂರ್ಣ ‌ಮುಕ್ಕಣ್ಣವರ ಆರೋಪಿಯ ಎದೆಗೆ ಗುಂಡು ಹಾರಿಸಿ ಜನರ ಮೆಚ್ಚುಗೆಗೆ ಕಾರಣರಾದವರು. ಅನ್ನಪೂರ್ಣ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಗುಜನಟ್ಟಿ ಗ್ರಾಮದವರು. ರೈತಾಪಿ ಕುಟುಂಬದಲ್ಲಿ ಹುಟ್ಟಿದ ಅನ್ನಪೂರ್ಣ ಎಂಎಸ್ಸಿ ಪದವೀಧರೆ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ತಾಯಿಯ ನೆರಳಲ್ಲಿ ಬೆಳೆದು ಪಿಎಸ್‌ಐ ಆದವರು ಅನ್ನಪೂರ್ಣ.ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಮುಗಿಸಿ, ಬೆಂಗಳೂರಿನ ಜಿಕೆವಿಕೆಯಲ್ಲಿ ಎಂಎಸ್ಸಿ ಪದವಿ ಮುಡಿಗೇರಿಸಿಕೊಂಡು ಬಂಗಾರದ ಪದಕ ಪಡೆದವರು ಅನ್ನಪೂರ್ಣ. ಎಂಎಸ್ಸಿ ಪದವಿ ಮುಗಿಸಿದರೂ ಬೇರೆ ನೌಕರಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಪೊಲೀಸ್ ವೃತ್ತಿ ಆಯ್ಕೆ ಮಾಡಿಕೊಂಡಿದ್ದ ಅನ್ನಪೂರ್ಣ, ಐದು ವರ್ಷದ ಬಾಲಕಿಯನ್ನ ಕೊಂದ ಹಂತಕನ ಎನ್‌ಕೌಂಟರ್ ಮಾಡಿ ಹುಬ್ಬಳ್ಳಿ-ಧಾರವಾಡ ಅಷ್ಟೇ ಅಲ್ಲದೆ ದೇಶದ ಜನರ ಮನ ಗೆದ್ದಿದ್ದಾರೆ. ಅನ್ನಪೂರ್ಣ ಅವರ ಸಾಹಸಕ್ಕೆ ಈಗ ಅಭಿನಂದನೆ ಸಲ್ಲಿಕೆಯಾಗುತ್ತಿವೆ. ಎನ್ ಕೌಂಟರ್ ನಿಂದ ಇಲಾಖೆಯಲ್ಲಿ ಅನ್ನಪೂರ್ಣ ವಿಚಾರಣೆ ಎದುರಿಸಬಹುದು.

ಇಲಾಖೆಯ ಪ್ರಕ್ರಿಯೆ ಏನೇನಾಗತ್ತೋ ಗೊತ್ತಿಲ್ಲ. ಆದರೆ, ಅನ್ನಪೂರ್ಣ ಮಾತ್ರ ಈಗ ಜನರ ಮನ ಗೆದ್ದಿದ್ದಾರೆ. ಜನ ತುಂಬು ಹೃದಯದಿಂದ ಹಾರೈಸುತ್ತಿದ್ದಾರೆ. ಹಲವಾರು ಮಹಿಳೆಯರು ಸಂತಸದ ಕಣ್ಣೀರಿನಿಂದ ಅನ್ನಪೂರ್ಣ ಅವರನ್ನು ಹಾರೈಸುತ್ತಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!