
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಭೀಕರ ದಾಳಿಗೆ 27 ಪ್ರವಾಸಿಗರು ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ ಹರಿಯಾಣದ ಕರ್ನಾಲ್‍ನ 26 ವರ್ಷದ ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಸಹ ಬಲಿಯಾಗಿದ್ದರು.
ನರ್ವಾಲ್ ಇತ್ತೀಚೆಗೆ ವಿವಾಹವಾಗಿದ್ದು ರಜೆಗಾಗಿ ಕಾಶೀರಕ್ಕೆ ತೆರಳಿದ್ದರು. ಕೊಚ್ಚಿಯಲ್ಲಿ ನಿಯೋಜನೆಗೊಂಡಿದ್ದ ವಿನಯ್ ಏಪ್ರಿಲ್ 16 ರಂದು ವಿವಾಹವಾಗಿದ್ದರು. ನಂತರ ಅಲ್ಪ ರಜೆಗಾಗಿ ಕಾಶೀರಕ್ಕೆ ಪ್ರಯಾಣ ಬೆಳೆಸಿದ್ದರು ಎಂದು ರಕ್ಷಣಾ ಅಧಿಕಾರಿಗಳು ದೃಢಪಡಿಸಿದ್ದಾರೆ. ಅವರ ವಿವಾಹ ಆರತಕ್ಷತೆ ಏಪ್ರಿಲ್ 19 ರಂದು ನಡೆಯಿತು. ಮೂಲಗಳ ಪ್ರಕಾರ ನವ ದಂಪತಿಗಳು ಪಹಲ್ಗಾಮ್‍ನಲ್ಲಿ ಹನಿಮೂನ್‍ಗೆ ತೆರಳಿದ್ದರು ಎನ್ನಲಾಗಿದೆ.
ನರ್ವಾಲ್ ಕೇವಲ ಎರಡು ವರ್ಷಗಳ ಹಿಂದೆ ನೌಕಾಪಡೆಗೆ ಸೇರಿದ್ದರು ಮತ್ತು ಕೊಚ್ಚಿಯಲ್ಲಿ ನಿಯೋಜನೆಗೊಂಡಿದ್ದರು. ಅವರ ಸಾವು ಅವರ ಕುಟುಂಬಕ್ಕೆ ಆಘಾತ ಬಡಿದಂತಾಗಿದೆ. ಹೀಗೆ ಸಾವನ್ನಪ್ಪಿದ ವಿನಯ್ ಮೃತದೇಹವನ್ನು ಹರಿಯಾಣಕ್ಕೆ ಕಳುಹಿಸಲಾಗಿದ್ದು, ವಿನಯ್ ಸಹೋದರಿ ಹರಿಯಾಣ ಸಿಎಂ ನಯಾಬ್ ಸೈನಿ ಎದುರು ಘಟನೆ ನಡೆದ ಸ್ಥಳದಲ್ಲಿ ಯಾರೊಬ್ಬರೂ ಇರಲಿಲ್ಲ, ಭದ್ರತಾ ಕೊರತೆ ಇತ್ತು ಎಂಬುದನ್ನು ಗೋಳಾಡುತ್ತಾ ಬಿಚ್ಚಿಟ್ಟಿದ್ದಾರೆ.
ಹೌದು, ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು ನನ್ನ ಸೋದರ ದಾಳಿ ನಡೆದ ಒಂದೂವರೆ ಗಂಟೆ ಜೀವಂತವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದ. ಆ ಸಮಯದಲ್ಲಿ ಯಾರೂ ಇರಲಿಲ್ಲ. ಆರ್ಮಿಯವರು ಇದ್ದಿದ್ದರೆ ಅಥವಾ ಯಾರಾದೂ ಸೆಕ್ಯೂರಿಟಿ ಇದ್ದಿದ್ರೆ ಆತ ಬದುಕುತ್ತಿದ್ದ. ಆದರೆ ಯಾರೂ ಬರಲೇ ಇಲ್ಲ ಎಂದು ವಿನಯ್ ಸೋದರಿ ಆಕ್ರೋಶ ಹೊರಹಾಕಿದ್ದಾರೆ
ಘಟನೆಯೂ ಸೈನ್ಯಕ್ಕೆ ನೇಮಕಾತಿಯಾಗದೇ ಇರುವುದರಿಂದ ಸಿಬ್ಬಂದಿ ಕೊರತೆಯಾಗಿದೆ ಎಂದು ಕೇಳಿಬರುತ್ತಿರುವ ವಾದಕ್ಕೆ ಬಲ ತುಂಬಿದೆ.






