
ನಗರ ಹೊರವಲಯದ ಕುಡುಪು ಬಳಿ ರವಿವಾರ ಸಂಜೆ ಯುವಕನ ಕೊಲೆ ನಡೆದಿರುವುದಾಗಿ ವರದಿಯಾಗಿದೆ.ಉತ್ತರ ಭಾರತದ ಮೂಲದ ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆಗೈಯಲಾಗಿದೆ ಎಂದು ಹೇಳಲಾಗುತ್ತಿದೆ.
ರೈಲ್ವೇ ಕಾಮಗಾರಿ ಅಥವಾ ಇನ್ಯಾವುದೋ ಕಟ್ಟಡ ನಿರ್ಮಾಣ ಕಾರ್ಮಿಕನಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದು, ಆತನ ಗುರುತು ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಮೂಲಗಳ ಪ್ರಕಾರ, ಪಂಜಿರೇಲ್‌ನ ಸ್ಥಳೀಯ ಮೈದಾನದಲ್ಲಿ ರವಿವಾರ ಕ್ರಿಕೆಟ್ ಪಂದ್ಯಾಕೂಟವನ್ನು ಆಯೊಜಿಸಲಾಗಿತ್ತು. ಅಲ್ಲಿಗೆ ಈ ವ್ಯಕ್ತಿ ಬಂದಿದ್ದ. ಯಾವುದೋ ವಿಚಾರಕ್ಕೆ ಅಪರಿಚಿತ ವ್ಯಕ್ತಿ ಮತ್ತು ಅಲ್ಲಿದ್ದವರ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಆತನ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ತೀವ್ರ ಗಾಯಗೊಂಡ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.






