ಕೇರಳದ ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿ ತಾಲೂಕಿನ ಪುಲ್ಪಲ್ಲಿ ನಿವಾಸಿಯಾಗಿದ್ದ ಯುವಕ ಅಶ್ರಫ್‌ನ ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಮಂಗಳೂರಿನ ವೆನ್‌ಲಾಕ್ ಶವಾಗಾರದಲ್ಲಿದ್ದ ಅಶ್ರಫ್‌ನ ಮೃತದೇಹವನ್ನು ಅವನ ಕುಟುಂಬಸ್ಥರು ಗುರುತಿಸಿ, ಪೊಲೀಸರಿಂದ ಸ್ವೀಕರಿಸಿದ್ದಾರೆ.
ನಡುರಾತ್ರಿ ಕೇರಳದಿಂದ ಆಗಮಿಸಿದ ಅಶ್ರಫ್‌ನ ಸಹೋದರ ಮತ್ತು ಕುಟುಂಬಸ್ಥರು, ಶವದ ಗುರುತು ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದರು. ಅಶ್ರಫ್ ಎಂದು ಖಚಿತಪಡಿಸಿದ ಬಳಿಕ, ಪೊಲೀಸರು ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಈ ವೇಳೆ ಮಂಗಳೂರಿನ ಕಾಂಗ್ರೆಸ್ ನಾಯಕರು ಮತ್ತು ಮುಸ್ಲಿಂ ಮುಖಂಡರು ಶವಾಗಾರದಲ್ಲಿ ಉಪಸ್ಥಿತರಿದ್ದರು. ಹತ್ಯೆಯ ಹಿನ್ನೆಲೆಯ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆಯಿದೆ
ಇನ್ಸ್‌ಪೆಕ್ಟರ್ ವಿರುದ್ಧ ಕರ್ತವ್ಯ ಲೋಪ ಆರೋಪ
ಮಂಗಳೂರು ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್ ವಿರುದ್ಧ ಕರ್ತವ್ಯ ಲೋಪದ ಆರೋಪ ಕೇಳಿಬಂದಿದ್ದು, ಪ್ರಕರಣವನ್ನು ಸರಿಯಾಗಿ ತನಿಖೆ ಮಾಡದೆ ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಆರೋಪವೇನು?
ಪ್ರಾಥಮಿಕ ತನಿಖೆಯಲ್ಲಿ ಮೃತದೇಹದ ಮೇಲೆ ಗಂಭೀರ ಗಾಯಗಳು ಕಂಡುಬಂದರೂ, ಇನ್ಸ್‌ಪೆಕ್ಟರ್ ಶಿವಕುಮಾರ್ ಈ ಪ್ರಕರಣವನ್ನು ಕೊಲೆಯೆಂದು ದಾಖಲಿಸದೆ, ಯುಡಿಆರ್ (ಅನೈಸರ್ಗಿಕ ಮರಣ) ಪ್ರಕರಣವೆಂದು ದಾಖಲಿಸಿಕೊಂಡಿದ್ದಾರೆ ಎಂದು ಆರೋಪವಿದೆ. ಈ ಕಾರಣಕ್ಕಾಗಿ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ಪತ್ರ ಬರೆದು, ಇನ್ಸ್‌ಪೆಕ್ಟರ್ ಶಿವಕುಮಾರ್ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದ್ದಾರೆ. ಜೊತೆಗೆ, ಈ ಪ್ರಕರಣದ ಉನ್ನತ ಮಟ್ಟದ ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚಿಸುವಂತೆಯೂ ಪತ್ರದಲ್ಲಿ ಕೋರಿದ್ದಾರೆ
ಪ್ರಕರಣದ ಬೆಳವಣಿಗೆ
ಪೊಲೀಸರು ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 25 ಜನರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ ಮೃತ ಯುವಕನ ಗುರುತು ಪತ್ತೆಯಾಗಿರಲಿಲ್ಲ. ಆದರೆ, ಕೇರಳದಿಂದ ಆಗಮಿಸಿದ ಕುಟುಂಬಸ್ಥರು ಶವವನ್ನು ಗುರುತಿಸಿದ ಬಳಿಕ, ಯುವಕನನ್ನು ಅಶ್ರಫ್ ಎಂದು ಖಚಿತಪಡಿಸಲಾಗಿದೆ. ಮಂಗಳೂರಿನ ವೆನ್‌ಲಾಕ್ ಶವಾಗಾರದಲ್ಲಿ ಇರಿಸಲಾಗಿದ್ದ ಮೃತದೇಹವನ್ನು ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಈ ವೇಳೆ ಮಂಗಳೂರಿನ ಕಾಂಗ್ರೆಸ್ ನಾಯಕರು ಮತ್ತು ಮುಸ್ಲಿಂ ಮುಖಂಡರು ಉಪಸ್ಥಿತರಿದ್ದರು.














