ತಂದೆಯ ಕೊಲೆಗೆ ಪ್ರತೀಕಾರವಾಗಿ ಮಗ, ತನ್ನ ಸಹಚರರೊಂದಿಗೆ ಸೇರಿ ಸೋದರ ಮಾವನನ್ನೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಡಿ.ಜೆ.ಹಳ್ಳಿ ನಿವಾಸಿ ಸೈಯದ್‌ ಸಿರಾಜುದ್ದೀನ್‌(32) ಕೊಲೆಯಾದವರು.ಭಾನುವಾರ ರಾತ್ರಿ ಸುಮಾರು 7.30ಕ್ಕೆ ಟಿನ್‌ ಫ್ಯಾಕ್ಟರಿ ಬಳಿ ಈ ಘಟನೆ ನಡೆದಿದ್ದು, ಕೊಲೆಯಾದ ಸಿರಾಜುದ್ದೀನ್‌ನ ಅಕ್ಕನ ಮಗನಾದ ಹಲಸೂರಿನ ಆರೋಪಿ ಫಹಾದ್‌(24), ಆತನ ಸಹಚರರಾದ ಶರೀಪುದ್ದೀನ್‌, ಮೊಹಮ್ಮದ್‌ ತೌಹಿದ್‌ ಹಾಗೂ ಇರ್ಷಾದ್‌ ಎಂಬುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಕೊಲೆಯಾದ ಸೈಯದ್‌ ಸಿರಾಜುದ್ದೀನ್‌ ಮತ್ತು ಆರೋಪಿ ಫಹಾದ್‌ನ ತಾಯಿಯ ಸಹೋದರ. 2010ರಲ್ಲಿ ಕೌಟುಂಬಿಕ ವಿಚಾರಕ್ಕೆ ಸಿರಾಜುದ್ದೀನ್‌ ತನ್ನ ಅಕ್ಕನ ಪತಿ ಅನ್ವರ್‌ ಪಾಷಾನನ್ನು ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಪೊಲೀಸರು ಸಿರಾಜುದ್ದೀನ್‌ನನ್ನು ಬಂಧಿಸಿ ಜೈಲಿಗಟ್ಟಿದ್ದರು. ಸುಮಾರು 10 ವರ್ಷ ಜೈಲು ಶಿಕ್ಷೆ ಅನುಭವಿಸಿ ಮೂರು ವರ್ಷಗಳ ಹಿಂದೆ ಸಿರಾಜುದ್ದೀನ್‌ ಜೈಲಿನಿಂದ ಬಿಡುಗಡೆಯಾಗಿದ್ದ. ಬಳಿಕ ಟಿನ್‌ ಫ್ಯಾಕ್ಟರಿ ಬಳಿಯ ದರ್ಗಾಮೊಹಲ್ಲಾದ ರಸ್ತೆ ಬದಿ ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ತಂದೆಯ ಕೊಲೆ ಸಮಯದಲ್ಲಿ ಆರೋಪಿ ಫಹಾದ್‌ 9 ವರ್ಷದ ಬಾಲಕನಾಗಿದ್ದ. ತನ್ನ ಕಣ್ಣೆದುರೇ ತಂದೆಯನ್ನು ಕೊಲೆ ಮಾಡಿದ್ದ ಸಿರಾಜುದ್ದೀನ್‌ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ. ಅದರಂತೆ ಭಾನುವಾರ ರಾತ್ರಿ ಟಿನ್‌ಫ್ಯಾಕ್ಟರಿ ಬಳಿ ಸಿರಾಜುದ್ದೀನ್‌ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಫಹಾದ್‌, ತನ್ನ ಸಹಚ ರರೊಂದಿಗೆ ಬಂದು ಮಾರಕಾಸ್ತ್ರಗಳಿಂದ ತೀವ್ರ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಸಿರಾಜುದ್ದೀನ್‌ನನ್ನು ಸ್ಥಳೀಯರ ನೆರವಿನಿಂದ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸಲಿಲ್ಲ ‘ ಎಂದು ಹೇಳಿದರು

ಪ್ರಕರಣ ದಾಖಲಿಸಿದ ರಾಮಮಮೂರ್ತಿನಗರ ಠಾಣೆ ಪೊಲೀಸರು, ಕ್ಷಿಪ್ತ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ಫಹಾದ್‌ ಸೇರಿ ನಾಲ್ವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!