
ಆಪರೇಷನ್ ಸಿಂದೂರ್ ಬಳಿಕ ಮಾಧ್ಯಮಗೋಷ್ಟಿ ಸಾರಥ್ಯ ವಹಿಸಿದ್ದ ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ(Colonel Sofiya Qureshi)ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಧ್ಯಪ್ರದೇಶ ಸಚಿವ ವಿಜಯ್ ಶಾ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಸಚಿವರ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಬೇಷರತ್ತು ಕ್ಷಮೆಯಾಚಿಸಬೇಕೆಂದು ಖಡಕ್ ಸೂಚನೆ ನೀಡಿದೆ.
ಸೋಫಿಯಾ ಖುರೇಷಿ ವಿರುದ್ಧ ಅವಹೇಳನಾಕಾರಿ ಹೇಳಿಕೆಗೆ ವಿಚಾರಕ್ಕೆ ಸಂಬಂಧಿಸಿದಂತೆ ಬಂಧನದಿಂದ ರಕ್ಷಣೆ ಕೋರಿ ಸಚಿವ ವಿಜಯ್ ಶಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಇದ್ದ ನ್ಯಾಯಪೀಠ, ಒಬ್ಬರ ಬಗ್ಗೆ ಹೇಳಿಕೆ ನೀಡುವಾಗ ಸ್ವಲ್ಪ ಸೂಕ್ಷ್ಮತೆ ತೋರಬೇಕು. ಈ ರೀತಿಯ ಹೇಳಿಕೆ ನೀಡಲು ಹೇಗೆ ಸಾಧ್ಯ? ಇದು ಸ್ವೀಕಾರಾರ್ಹವಲ್ಲ. ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಗಳು ಇಂತಹ ಹೇಳಿಕೆ ನೀಡುವುದು ಶೋಭೆ ತರುವುದಿಲ್ಲ ಎಂದು ಹೇಳುವ ಮೂಲಕ ಶಾ ಅವರ ಅರ್ಜಿಯನ್ನು ತಿರಸ್ಕರಿಸಿದೆ.






