





ಬುಧವಾರ ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಾತ್ಕಾಲಿಕ ಏರ್ ಫೋರ್ಸ್ ಒನ್ ಆಗಿ ಪರಿವರ್ತಿಸಲು ಸಿದ್ಧವಾಗಿರುವ ಕತಾರ್‌ನಿಂದ ಬಂದ ಬೋಯಿಂಗ್ 747 ವಿಮಾನವನ್ನು ಪೆಂಟಗನ್ ಸ್ವೀಕರಿಸಿದ ಬಗ್ಗೆ ಪ್ರಶ್ನಿಸಿದ ಎನ್‌ಬಿಸಿ ವರದಿಗಾರನಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ʼಗೆಟ್ ಔಟ್ʼ (ಹೊರಗೆ ನಡೆ) ಎಂದು ಗದರಿರುವ ಘಟನೆ ನಡೆದಿದೆ.
ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರೊಂದಿಗಿನ ಟ್ರಂಪ್ ಅವರ ಭೇಟಿಯ ಸಂದರ್ಭದಲ್ಲಿ, ದಕ್ಷಿಣ ಆಫ್ರಿಕಾದಲ್ಲಿ ರೈತರ ವಿರುದ್ಧದ ಹಿಂಸಾಚಾರವನ್ನು ಎತ್ತಿ ತೋರಿಸುವ ವೀಡಿಯೊವನ್ನು ಅಮೆರಿಕ ಅಧ್ಯಕ್ಷರು ಅವರಿಗೆ ತೋರಿಸಿದರು. ಇದಾದ ಸ್ವಲ್ಪ ಸಮಯದ ನಂತರ ಈ ಪ್ರಸಂಗ ನಡೆದಿದೆ.
ಎನ್‌ಬಿಸಿ ವರದಿಗಾರ ಪೀಟರ್ ಅಲೆಕ್ಸಾಂಡರ್ ಕತಾರ್ ಜೆಟ್ ಬಗ್ಗೆ ಕೇಳಿದಾಗ ಟ್ರಂಪ್ ಸಿಡಿದೆದ್ದಿದ್ದಾರೆ. ನೀನು ಏನು ಮಾತನಾಡುತ್ತಿದ್ದೀಯಾ? ನಿನಗೆ ತಿಳಿದಿದೆಯಾ? ಇಲ್ಲಿಂದ ಹೊರಟು ಹೋಗು ಎಂದು ಟ್ರಂಪ್ ಗದರಿದ್ದಾರೆ. ಇದಕ್ಕೂ ಕತಾರಿ ಜೆಟ್‌ಗೂ ಏನು ಸಂಬಂಧ? ಅವರು ಯುನೈಟೆಡ್ ಸ್ಟೇಟ್ಸ್ ವಾಯುಪಡೆಗೆ ಜೆಟ್ ನೀಡುತ್ತಿದ್ದಾರೆ. ಸರಿ? ಮತ್ತು ಅದು ಒಳ್ಳೆಯ ವಿಷಯ. ನಾವು ಇನ್ನೂ ಅನೇಕ ವಿಷಯಗಳ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಮುಂದುವರಿಸಿ ಹೇಳಿದ್ದಾರೆ
ನಂತರ ಅವರು ವರದಿಗಾರನ ಬುದ್ಧಿಮತ್ತೆ ಮತ್ತು ಎನ್‌ಬಿಸಿ ಯ ಕಾರ್ಪೊರೇಟ್ ನಾಯಕತ್ವವನ್ನು ಕಟುವಾಗಿ ಟೀಕಿಸಿದ್ದಾರೆ. ನೀನು ನಿಜವಾದ ವರದಿಗಾರ, ನೀವು ಭಯಾನಕ ವರದಿಗಾರ. ನಂ. 1, ವರದಿಗಾರನಾಗಲು ಬೇಕಾದ ಅರ್ಹತೆಗಳು ನಿನ್ನಲ್ಲಿ ಇಲ್ಲ. ನೀನು ಸಾಕಷ್ಟು ಬುದ್ಧಿವಂತನಲ್ಲ. ನೀನು ಎನ್‌ಬಿಸಿ ಸ್ಟುಡಿಯೋಗೆ ಹಿಂತಿರುಗು. ಏಕೆಂದರೆ ಬ್ರಿಯಾನ್ ರಾಬರ್ಟ್ಸ್ ಮತ್ತು ಆ ಸ್ಥಳವನ್ನು ನಡೆಸುವ ಜನರನ್ನು ತನಿಖೆ ಮಾಡಬೇಕು. ಇದು ನಾಚಿಕೆಗೇಡು. ನಿಮ್ಮಲ್ಲಿ ಬೇರೆ ಯಾವುದೇ ಪ್ರಶ್ನೆಗಳಿಲ್ವಾ ಎಂದು ಕೇಳಿದ್ದಾರೆ.
ಟ್ರಂಪ್ ನಂತರ ಟ್ರೂತ್ ಸೋಷಿಯಲ್‌ನಲ್ಲಿ 400 ಮಿಲಿಯನ್ ಡಾಲರ್ ಮೌಲ್ಯದ ಬೋಯಿಂಗ್ 747 ನನಗೆ ಅಲ್ಲ, ಆದರೆ ಯುಎಸ್ ವಾಯುಪಡೆಗೆ ಉಡುಗೊರೆ ಎಂದು ಪುನರುಚ್ಚರಿಸಿದ್ದಾರೆ. ಇದು ಒಂದು ರಾಷ್ಟ್ರ, ಕತಾರ್‌ನಿಂದ ಬಂದ ಉಡುಗೊರೆಯಾಗಿದೆ. ನಮ್ಮ ಹೊಸ ಬೋಯಿಂಗ್‌ಗಳು ಬರುವವರೆಗೆ ಇದನ್ನು ನಮ್ಮ ಸರ್ಕಾರ ತಾತ್ಕಾಲಿಕ ಏರ್ ಫೋರ್ಸ್ ಒನ್ ಆಗಿ ಬಳಸುತ್ತದೆ ಎಂದಿದ್ಧಾರೆ. ಕಾನೂನುಬದ್ಧತೆ, ನೈತಿಕತೆ ಮತ್ತು ವಿದೇಶಿ ಪ್ರಭಾವದ ಬಗ್ಗೆ ಕಳವಳಗಳ ಹೊರತಾಗಿಯೂ, ಪೆಂಟಗನ್ ಜೆಟ್‌ನ ಸ್ವೀಕಾರವನ್ನು ದೃಢಪಡಿಸಿದೆ.

