ಬೆಳ್ತಂಗಡಿ : ಬಂಟ್ವಾಳ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ ಸಂಬಂಧ ಕೊಲೆ ಮಾಡಿದ ಪ್ರಮುಖ ಇಬ್ಬರು ಆರೋಪಿಗಳನ್ನು ಬೆಳ್ತಂಗಡಿಯ ನಾಲ್ಕು ಸ್ಥಳಗಳಿಗೆ ಇಂದು ಸಂಜೆ  ಬಿಗಿ ಪೊಲೀಸ್ ಭದ್ರತೆಯಲ್ಲಿ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ.


*ಪ್ರಕರಣ:* ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ಮೇ.27 ರಂದು ಸಂಜೆ ಪಿಕಪ್ ಚಾಲಕ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ ಮತ್ತು ಕಲಂದರ್ ಶಾಫಿ ಕೊಲೆ ಯತ್ನ ಪ್ರಕರಣ ಸಂಬಂಧ ಐದು ಜನ ಆರೋಪಿಗಳನ್ನು ಬಂಧಿಸಿ ಪೊಲೀಸರು ಪೊಲೀಸ್ ಕಸ್ಟಡಿ ಪಡೆದುಕೊಂಡು ವಿಚಾರಣೆ ಹಾಗೂ ಆರೋಪಿಗಳು ಓಡಾಡಿದ ವಿವಿಧ ಸ್ಥಳಗಳಿಗೆ ತೆರಳಿ ಮಹಜರು ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ.


*ಸ್ಥಳ ಮಹಜರು:* ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಮುಂಡರಕೋಡಿ ನಿವಾಸಿ ದೀಪಕ್(21)  ಮತ್ತು ಬಂಟ್ವಾಳ ತಾಲೂಕಿನ ತೆಂಕಬೆಳ್ಳುರು ಗ್ರಾಮದ ಸುಮಿತ್ ಆಚಾರ್ಯ(27) ನನ್ನು ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಜೂ.2 ರಂದು ಬೆಳ್ತಂಗಡಿಯ ಗುರುವಾಯನಕೆರೆ ಅಂಗಡಿ, ಬೆಳ್ತಂಗಡಿಯ ಸಂತೆಕಟ್ಟೆ ಮೊಬೈಲ್ ಅಂಗಡಿ, ಬೆಳ್ತಂಗಡಿ ಮೂರು ಮಾರ್ಗದ ಬಳಿ, ಉಜಿರೆಯ ನಿಡಿಗಲ್ ನದಿಯ ಬಳಿ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ.


*ಬೆಳ್ತಂಗಡಿಯ ನಾಲ್ಕು ಕಡೆ ಓಡಾಟ:*  ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ದೀಪಕ್ ಮತ್ತು ಸುಮಿತ್ ಆಚಾರ್ಯ ಅಬ್ದುಲ್ ರಹಿಮಾನ್ ಕೊಲೆ ಮಾಡಿದ ಬಳಿಕ ಬೈಕ್ ಮೂಲಕ ನೇರ ಬೆಳ್ತಂಗಡಿ ಕಡೆ ಪ್ರಯಾಣ ಮಾಡಿದ್ದಾರೆ. ಈ ವೇಳೆ ಕುವೆಟ್ಟು ಗ್ರಾಮದ ಗುರುವಾಯನಕೆರೆಯ  ಅಂಗಡಿಯೊಂದರಲ್ಲಿ ಹೊಸ ರೈನ್ ಕೋಟ್ ಖರೀದಿ ಮಾಡಿದ ನಂತರ  ಬೆಳ್ತಂಗಡಿಯ ಸಂತೆಕಟ್ಟೆ ಮೊಬೈಲ್ ಶಾಪ್ ಗೆ ಬಂದು ಸೀಮ್ ರಿಮೂವ್ ಮಾಡುವ ಇಜೆಕ್ಟರ್ ಪಡೆದುಕೊಂಡು ಆರೋಪಿಗಳು ತಮ್ಮ ಮೊಬೈಲ್ ನಿಂದ ಸೀಮ್ ತೆಗೆದು ಹೊರದೇಶದ ಕರೆನ್ಸಿ ಕೊಟ್ಟು ನೀಡಿ ಅಲ್ಲಿಂದ ಮೂರು ಮಾರ್ಗದ ಹೆದ್ದಾರಿಯ ಬದಿಯ ಚರಂಡಿಗೆ ಸೀಮ್ ಬಿಸಾಕಿ ನೇರ ಉಜಿರೆ ಮೂಲಕ ಕಲ್ಮಂಜ ಗ್ರಾಮದ ನಿಡಿಗಲ್ ನದಿಗೆ ತಮ್ಮ ಮೊಬೈಲ್ ಬಿಸಾಕಿ ಚಿಕ್ಕಮಗಳೂರು ಕಡೆ ಪರಾರಿಯಾಗಿದ್ದರು ಎನ್ನಲಾಗಿದೆ.

*ಹೊರದೇಶದ ಕರೆನ್ಸಿ ವಶಕ್ಕೆ:* ನಾಲ್ಕು ಕಡೆ ಇಬ್ಬರು ಆರೋಪಿಗಳನ್ನು ಕರೆತಂದು ಸ್ಥಳ ಮಹಜರು ಮಾಡಿದ್ದು ಪೊಲೀಸರಿಗೆ ಆರೋಪಿಗಳು ಬಿಸಾಕಿದ ಸೀಮ್ , ಮೊಬೈಲ್ ಎಷ್ಟೇ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ ಎನ್ನಲಾಗಿದೆ. ಮೊಬೈಲ್ ಶಾಪ್ ಗೆ ನೀಡಿದ ವಿದೇಶಿ ಕರೆನ್ಸಿ ಶಾಪ್ ಮಾಲಕರು ತಮ್ಮ ಡ್ರಾಯರ್ ನಲ್ಲಿ ಇಟ್ಟಿದ್ದರು ಇದನ್ನು ಪೊಲೀಸರು ಬಂದು ವಿಚಾರಣೆ ಮಾಡಿದಾಗ ಕರೆನ್ಸಿಯನ್ನು ತಗೆದುಕೊಟ್ಟು ಮಹಜರಿಗೆ ಸಹಕರಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!