
ಪುತ್ತೂರು: ಗಡಿಪಾರು ಆದೇಶವನ್ನು ಮುಂದಿನ ದಿನಗಳಲ್ಲಿ ಅದನ್ನು ಸವಾಲಾಗಿ ಸ್ವೀಕರಿಸಿ ಇಡೀ ಹಿಂದೂ ಸಮಾಜಕ್ಕೆ ನ್ಯಾಯ ಕೊಡುವ ಕೆಲಸವನ್ನು ಮಾಡಲಿದ್ದೇನೆ. ಇಂದಿನಿಂದ ರಾತ್ರಿ ಪೊಲೀಸ್ ಇಲಾಖೆ ಯಾವುದೇ ಹಿಂದೂ ಕಾರ್ಯಕರ್ತನ ಮನೆಗೆ ನುಗ್ಗುವ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಹಿಂದೂ ಸಮಾಜದ ಶಕ್ತಿ ಏನೆಂಬುದನ್ನು ತೋರಿಸಲಿದ್ದೇವೆ ಎಂದು ಅರುಣ್ ಕುಮಾರ್ ಪುತ್ತಿಲ ಎಚ್ಚರಿಕೆ ನೀಡಿದ್ದಾರೆ.
ಅವರು ಮಂಗಳವಾರ ಸಂಜೆ ಮುಕ್ರಂಪಾಡಿ ಸುಭದ್ರ ಸಭಾಭವನದಲ್ಲಿ ಹಿಂದೂ ಕಾರ್ಯಕರ್ತರ ಮನೆಗೆ ರಾತ್ರೋ ರಾತ್ರಿ ನುಗ್ಗಿ ದರ್ಪ ತೋರಿಸುತ್ತಿರುವ ಸರ್ವಾಧಿಕಾರಿ ವ್ಯವಸ್ಥೆ ಹಾಗೂ ಗಡಿಪಾರು ಆದೇಶ ವಿರೋಧಿಸಿ ನಡೆದ ಬೃಹತ್ ಖಂಡನ ಸಭೆಯಲ್ಲಿ ಮಾತನಾಡಿದರು.
ಹಿಂದೂ ಸಮಾಜಕ್ಕೋಸ್ಕರ, ಸಂಘಟನೆಗೋಸ್ಕರ ಕೆಲಸ ಮಾಡುತ್ತಿರುವ ಹಿಂದೂ ಕಾರ್ಯಕರ್ತರ ಮೇಲೆ ಸಿದ್ಧರಾಮಯ್ಯ ಸರಕಾರ ಪೊಲೀಸರ ಮೂಲಕ ಮೇಲೆ ಸವಾರಿ ಮಾಡಿದರೆ ಅದನ್ನು ಯಾವತ್ತೂ ಹಿಂದೂ ಸಮಾಜ ಸಹಿಸುವುದಿಲ್ಲ.ಈ ರೀತಿಯ ಕೆಲಸಗಳಿಗೆ ಮುಂದಿನ ದಿನಗಳಲ್ಲಿ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ. ಎಂದ ಅವರು, ಮೂಲ ನಂಬಿಕೆಗಳನ್ನು ಅಳಿಸಿ, ಗೋಹತ್ಯೆ, ಮತಾಂತರಕ್ಕೆ ಕುಮ್ಮಕ್ಕು ನೀಡುವ ಕೆಲಸ ಸರಕಾರದಿಂದ ಆಗುತ್ತಿದೆ. ಇದೀಗ ಗಡಿಪಾರು, ರಾತ್ರಿ ಮನೆಗೆ ನುಗ್ಗಿ ಹಿಂದೂಗಳನ್ನು ದಮನಿಸುವ ಕೆಲಸ ಮಾಡುತ್ತಿರುವ ಸರಕಾರ ಮುಂದೆ ಯಾವ ರೀತಿ ನಡೆಸಿಕೊಳ್ಳುತ್ತಿದೆ ಎಂಬುದರ ಕುರಿತು ಆಲೋಚನೆ ಮಾಡಬೇಕಾಗಿದೆ. ಸರಕಾರದ ಈ ನಡೆಯನ್ನು ಸವಾಲಾಗಿ ಸ್ವೀಕರಿಸಬೇಕಾಗಿದೆ. ಬೇರೆಯವರನ್ನು ಓಲೈಕೆ ಮಾಡಿ ಅಧಿಕಾರಕ್ಕೆ ಬರುವವರು ಬಿಜೆಪಿ ಪಕ್ಷವಲ್ಲ. ಮುಂದಿನ ದಿನಗಳಲ್ಲಿ ದ.ಕ.ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರಗಳನ್ನು ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಪ್ರತಿಯೊಬ್ಬ ಹಿಂದೂ ಶ್ರಮಿಸಬೇಕಾಗಿದೆ ಎಂದರು
ದಿಕ್ಸೂಚಿ ಭಾಷಣ ಮಾಡಿದ ಗಣರಾಜ ಭಟ್, ಪುರಾಣಗಳ ಆಶಯದಂತೆ ಹಿಂದೂ ಬದುಕು ನಡೆಸುತ್ತಿದ್ದು, ಇದೀಗ ಸಿದ್ಧರಾಮಯ್ಯ ಸರಕಾರ ಹಿಂದೂಗಳನ್ನು ವಿವಿಧ ರೀತಿಯಲ್ಲಿ ದಮನಿಸುವ ಕೆಲಸ ಮಾಡುತ್ತಿರುವುದು ದುರಾದೃಷ್ಟ. ಇಂತಹಾ ತಲೆಕೆಟ್ಟ ಸರಕಾರಕ್ಕೆ ವಿನಾಶ ಕಾಲ ಬಂದಿದೆ. ಸರಕಾರಕ್ಕೆ ಕೊನೆಯ ಮೊಳೆ ಹೊಡೆಯುವ ಕೆಲಸ ಹಿಂದೂಗಳಿoದ ಅಲ್ಲ, ಬದಲಾಗಿ ಅಲ್ಪಸಂಖ್ಯಾತರಿoದಲೇ ಆಗುವ ಪರಿಸ್ಥಿತಿ ಬಂದಿದೆ.ಗಡಿಪಾರು ಆದೇಶ, ರಾತ್ರಿ ಮನೆಗಳಿಗೆ ನುಗ್ಗಿ ದಮನಿಸುವ ಕೆಲಸ ಬಿಟ್ಟು ಗೋಸಾಗಾಟ, ಗಾಂಜಾ ಸಾಗಾಟ ಮಾಡುವವರನ್ನು ಯಾಕೆ ಗಡಿಪಾರು ಮಾಡುವುದಿಲ್ಲ. ಸಮಾಜಕ್ಕೋಸ್ಕರ ಪ್ರಾಣವನ್ನೇ ಅರ್ಪಿಸುವವರನ್ನು ಗಡಿಪಾರು ಮಾಡುವುದರಲ್ಲಿ ಅರ್ಥವಿದೆಯೇ ಎಂದು ಪ್ರಶ್ನಿಸಿದ ಅವರು, ಪಾಂಡವರನ್ನು ಗಡಿಪಾರು ಮಾಡಿದ ಕೌರವರೇ ಉಳಿಯಲಿಲ್ಲ, ರಾಮನನ್ನು ಗಡಿಪಾರು ಮಾಡಿದ ರಾವಣ ಸೇನೆಯೇ ಉಳಿಯಲಿಲ್ಲ.ಇನ್ನು ಸಮಾಜಕ್ಕೋಸ್ಕರ ರಾತ್ರಿ ಹಗಲೆನ್ನದೆ ಶ್ರಮಿಸುತ್ತಿರುವ ಅರುಣ್ ಕುಮಾರ್ ಪುತ್ತಿಲ ಅವರನ್ನು ಗಡಿಪಾರು ಮಾಡಿದರೆ ಕಾಂಗ್ರೆಸ್ ಸರಕಾರದ ಉಳಿಯಲಿದೆಯೇ ಎಂದು ತಿಳಿಸಿದರು.
ಇಂತಹಾ ಕಠಿಣ ಸಂದೇಶವನ್ನು ನೀಡಲು ಸಿದ್ಧರಾಮಯ್ಯ ಸರಕಾರವೇ ಅವಕಾಶ ಮಾಡಿಕೊಟ್ಟಿದೆ. ಗಡಿಪಾರು ಯಾವತ್ತೂ ಕನಸಿನ ಮಾತು ಎಂದರು.
ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ಧರ್ಮಕ್ಕಾಗಿ ಶ್ರಮಿಸುತ್ತಿರುವ ಹಿಂದೂಗಳ ಮನೆಗೆ ನುಗ್ಗಿ ದಮನಿಸುವ ಕೆಲಸ, ಗಡಿಪಾರು ಆದೇಶವನ್ನು ಸಿದ್ಧರಾಮಯ್ಯ ಸರಕಾರ ಮಾಡಲು ಹೊರಟಿದೆ. ಈ ನಿಟ್ಟಿನಲ್ಲಿ ಹಿಂದೂಗಳು ತಮ್ಮೊಳಗಿನ ವೈಮನಸ್ಸು ಬಿಟ್ಟು ಒಂದಾಗಬೇಕಾದ ಪರಿಸ್ಥಿತಿ ಬಂದಿದೆ ಎಂದರು.
ಈ ಸಂದರ್ಭ ವೇದಿಕೆಯಲ್ಲಿ ನ್ಯಾಯವಾದಿ ಚಿನ್ಮಯ್ ರೈ, ಪುತ್ತಿಲ ಪರಿವಾರದ ಅಧ್ಯಕ್ಷ ಮಹೇಂದ್ರ ವರ್ಮ, ಗೌರವ ಸಲಹೆಗಾರ ಚಂದಪ್ಪ ಮೂಲ್ಯ, ಖಜಾಂಚಿ ಗಣೇಶ್, ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಮಠ, ಬಿಜೆಪಿ ಪ್ರಮುಖ ಅನಿಲ್ ತೆಂಕಿಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಬಿಜೆಪಿ ಮುಖಂಡ ಉಮೇಶ್ ಕೊಡಿಬೈಲು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಜೆ.ವಿಖ್ಯಾತ್, ನವೀನ್ ರೈ ಪಂಜಳ ಕಾರ್ಯಕ್ರಮ ನಿರೂಪಿಸಿದರು











