
ಗುಜರಾತ್ ನ ಅಹಮದಾಬಾದ್ ಏರ್ಪೋರ್ಟ್ನಲ್ಲಿ(ಜೂ.12) ಮಧ್ಯಾಹ್ನ ಟೇಕ್ ಆಫ್ ಆದ ಏರ್ ಇಂಡಿಯಾ ಎ1-171 ವಿಮಾನ ಕೇವಲ 32 ಸೆಕೆಂಡ್ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ಈ ದುರಂತದಲ್ಲಿ 265 ಮಂದಿ ಮೃತಪಟ್ಟಿದ್ದು, ಭಾರತೀಯ ವಾಯುಯಾನ ಇತಿಹಾಸದಲ್ಲೇ ಅತ್ಯಂತ ಭೀಕರ ಅಪಘಾತವಾಗಿದೆ.
ಪತ್ನಿ ಆಸೆ ಪೂರೈಸಿದ ಅರ್ಜುನ್..!
ಯುಕೆ ಮೂಲದ ಭಾರತೀಯ 36ರ ಅರ್ಜುನ್ ಮನುಭಾಯಿ ಪಟೋಲಿಯಾ, ತಮ್ಮ ಪತ್ನಿಯ ಚಿತಾಭಸ್ಮವನ್ನು ನರ್ಮದಾ ನದಿಯಲ್ಲಿ ವಿಸರ್ಜಿಸಲು ಅಮ್ರೇಲಿ ಜಿಲ್ಲೆಯ ವಾಡಿಯಾ ಎಂಬ ತಮ್ಮ ಪೂರ್ವಜರ ಗ್ರಾಮಕ್ಕೆ ಮರಳಿದ್ದರು. ಅವರ ಪತ್ನಿ ಭಾರತಿಬೆನ್, ಒಂದು ವಾರದ ಹಿಂದೆ ಲಂಡನ್‌ನಲ್ಲಿ ನಿಧನರಾಗಿದ್ದರು. ಭಾರತಿಬೆನ್ ನಿಧನರಾಗುವ ಮೊದಲು, ಅವರು ತಮ್ಮ ಪತಿಯನ್ನು ತಮ್ಮ ಚಿತಾಭಸ್ಮವನ್ನು ತಮ್ಮ ತಾಯ್ನಾಡಿಗೆ ತೆಗೆದುಕೊಂಡು ಹೋಗುವಂತೆ ಕೇಳಿಕೊಂಡಿದ್ದರು.
ವಾಡಿಯಾದಲ್ಲಿ ಸಂಬಂಧಿಕರೊಂದಿಗೆ ಅಂತ್ಯಕ್ರಿಯೆಯ ವಿಧಿಗಳನ್ನು ಮುಗಿಸಿದ ನಂತರ, ಪಟೋಲಿಯಾ ಯುಕೆಯಲ್ಲಿ ಉಳಿದಿದ್ದ 4 ಮತ್ತು 8 ವರ್ಷದ ಇಬ್ಬರು ಹೆಣ್ಣುಮಕ್ಕಳೊಂದಿಗೆ ಮನೆಗೆ ಮರಳಬೇಕಿತ್ತು. ಗುರುವಾರ, ಲಂಡನ್ಗೆ ಹೊರಡಲು ವಿಮಾನ ಏರಿದ್ದ ಪಟೋಲಿಯಾ ದುರಂತದಲ್ಲಿ ಮೃತಪಟ್ಟಿದ್ದಾರೆ. ಇದು ಹೃದಯವಿದ್ರಾವಕ. ಒಂದೇ ವಾರದಲ್ಲಿ ಇಬ್ಬರನ್ನೂ ಕಳೆದುಕೊಂಡಿದ್ದು, ಕುಟುಂಬ ಇದೀಗ ಅನಾಥವಾಗಿದೆ.






