
2 ತಿಂಗಳಿನಿಂದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಿರುವುದರಿಂದ ಕೊಳ್ತಿಗೆ ಗ್ರಾಮದ ಜನರಿಗೆ ಸಮಸ್ಯೆ ಆಗಿದ್ದು, ಕೂಡಲೇ ಬಸ್ ಸಂಚಾರ ಆರಂಭಿಸುವಂತೆ ಆಗ್ರಹಿಸಿ ಕೊಳ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಕ್ಕಮ್ಮ ನೇತೃತ್ವದಲ್ಲಿ ಪಂಚಾಯಿತಿ ಸದಸ್ಯರು, ಕಾಂಗ್ರೆಸ್ ಮುಖಂಡರು ಪುತ್ತೂರು ಕೆಎಸ್‌ಆರ್‌ಟಿಸಿ ಡಿಪೊ ಮ್ಯಾನೇಜರ್‌ಗೆ ಮನವಿ ಸಲ್ಲಿಸಿದ್ದಾರೆ.
ಕೊಳ್ತಿಗೆ ಭಾಗಕ್ಕೆ ಹಲವು ವರ್ಷಗಳಿಂದ ಬರುತ್ತಿದ್ದ ಕೆಲವು ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಿರುವುದರಿಂದ ಈ ಭಾಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ನಿಯೋಗದಲ್ಲಿದ್ದವರು ಮಾಹಿತಿ ನೀಡಿದರು.
ಕೊಳ್ತಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್., ಸದಸ್ಯರಾದ ಪವನ್ ಡಿ.ಜಿ., ವೇದಾವತಿ, ಯಶೋದಾ, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ, ಕಾಂಗ್ರೆಸ್ ಮುಖಂಡರಾದ ರಾಮಚಂದ್ರ ಸೊರಕೆ, ರವೀಂದ್ರ ರೈ ನೆಕ್ಕಿಲು ನಿಯೋಗದಲ್ಲಿ ಭಾಗವಹಿಸಿದ್ದರು.
ಜುಲೈ 1ರಿಂದ ಬಸ್ ಸೇವೆ:
ಪ್ರಸ್ತುತ ಪುತ್ತೂರು ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಬಸ್ ಚಾಲಕರ ಹಾಗೂ ನಿರ್ವಾಹಕರ ಕೊರತೆ ಇರುವುದೇ ಸಮಸ್ಯೆಗೆ ಕಾರಣವಾಗಿದೆ. ಚಾಲಕ-ನಿರ್ವಾಹಕರ ನೇಮಕಾತಿ ನಡೆಯುತ್ತಿದ್ದು, ಜುಲೈ 1ರಿಂದ 80 ಮಂದಿ ಸಿಬ್ಬಂದಿ ಡಿಪೊ ಸೇರಿಕೊಳ್ಳಲಿದ್ದಾರೆ. ಜುಲೈ 1ರಿಂದ ಮತ್ತೆ ಬಸ್ ಸೇವೆಯನ್ನು ಈ ಹಿಂದಿನಂತೆಯೇ ನೀಡಲಿದ್ದೇವೆ ಎಂದು ಮ್ಯಾನೇಜರ್ ಸುಬ್ರಹ್ಮಣ್ಯ ಭಟ್ ಅವರು ನಿಯೋಗಕ್ಕೆ ಭರವಸೆ ನೀಡಿರುವುದಾಗಿ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ತಿಳಿಸಿದ್ದಾರೆ.






