
ಸಿಎಂ ಸಿದ್ದರಾಮಯ್ಯ ಅವರು ಮುಂದಿನ ಎರಡು ವರ್ಷದ ಬಳಿಕ ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುತ್ತಾರೆ ಎಂಬ ಮಾತು ಈ ಹಿಂದೆ ಕೇಳಿ ಬಂದಿತ್ತು. ಆದರೆ ಸಿಎಂ ಆಪ್ತರು ಮಾತ್ರ ಸಿದ್ದು ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತಾರೆ ಎಂಬ ಮಾತನ್ನು ಆಡುತ್ತಿದ್ದಾರೆ ಇದೀಗ ಇವೆಲ್ಲ ಪ್ರಶ್ನೆಗಳಿಗೆ ಸಿಎಂ ಉತ್ತರ ಕೊಟ್ಟಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೂಗು ಕೇಳಿಸುತ್ತಿದ್ದಂತೆ ಎಐಸಿಸಿಯು ಸಿದ್ದರಾಮಯ್ಯ ಅವರನ್ನು ಒಬಿಸಿ ಸಲಹಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿ ರಾಷ್ಟ್ರ ಮಟ್ಟದ ಹುದ್ದೆಯನ್ನು ನೀಡಿದ್ದು, ಹೀಗಾಗಿ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತಾರೆ ಎಂದು ಸಿಎಂ ಆಪ್ತರು ತಿಳಿಸಿದ್ದರು.
ಆದರೆ ಇದೀಗ ಈ ಎಲ್ಲಾ ಹೇಳಿಕೆಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಪ್ರತಿಕ್ರಿಯಿಸಿದ್ದು, ನಾನು ಆಗ ಅವಕಾಶವಿದ್ದಾಗಲೇ ಹೋಗಿಲ್ಲ.. ಈಗ ಯಾಕೆ ಹೋಗಲಿ.. ರಾಷ್ಟ್ರ ರಾಜಕಾರಣದಲ್ಲಿ ನನಗೆ ಆಸಕ್ತಿಯಿಲ್ಲ, ವಯಸ್ಸು ಕೂಡ ಆಗಿದೆ. ಇನ್ನಾದರೂ ಸಾರ್ವಜನಿಕ ಬದುಕು ಇಲ್ಲೇ ಮುಗಿಸಿ ಮುಂದೆ ಹೋಗುತ್ತೇನೆ ಎಂದರು.
ರಾಷ್ಟ್ರ ರಾಜಕಾರಣದಲ್ಲಿ ನನಗೆ ಕಿಂಚಿತ್ತೂ ಆಸಕ್ತಿಯಿಲ್ಲ.. ಅಲ್ಲದೇ ವಯಸ್ಸು ಕೂಡ ಇಲ್ಲ. ರಾಜ್ಯ ರಾಜಕಾರಣಕ್ಕೆ ನನ್ನಿಂದ ಎಲ್ಲಾ ರೀತಿಯ ಕೊಡುಗೆ ಕೊಟ್ಟಿದ್ದೇನೆ.. ಅಷ್ಟು ಸಾಕು ಇನ್ನು ಗೌವಯುತವಾದ ಸಾರ್ವಜನಿಕ ಬದುಕನ್ನು ಇಲ್ಲೇ ಮುಗಿಯಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ರಾಷ್ಟ್ರ ರಾಜಕಾರಣದ ಬಗ್ಗೆ ಇಲ್ಲಿಯವರೆಗೆ ಆ ರೀತಿ ಚರ್ಚೆಗಳಾಗಿಲ್ಲ ಒಬಿಸಿ ಸಭೆಯ ನೇತೃತ್ವದ ಬಗ್ಗೆ ದೆಹಲಿಯ ನಾಯಕರಿಗೆ ವಿವರಣೆ ಕೊಡುತ್ತೇನೆ ಎಂದು ಸಿಎಂ ಹೇಳಿದರು. ಇನ್ನು ಇದೇ ಜುಲೈ 15 ರಂದು ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಡಾ. ಅನಿಲ್ ಜೈಹಿಂದ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಯಲಿದೆ.
ಇನ್ನು ಈ ಸಭೆ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಆತಿಥ್ಯವಹಿಸಿಕೊಳ್ಳಲಿದ್ದಾರೆ. ಅಲ್ಲದೇ ಈ ಸಭೆಯಲ್ಲಿ ವಿವಿಧ ರಾಜ್ಯಗಳ ಪಕ್ಷದ ಮಾಜಿ ಮುಖ್ಯಮಂತ್ರಿಗಳು, ಹಾಲಿ ಮತ್ತು ಮಾಜಿ ಸಂಸದರು, ಶಾಸಕರು ಸೇರಿದಂತೆ 50 ಮಂದಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.






