ಹನಿಮೂನ್ ನೆಪದಲ್ಲಿ ಗಂಡನ ಕೊಲೆ, ಡ್ರಮ್ನಲ್ಲಿ ತುಂಡರಿಸಿದ ಪತಿಯ ದೇಹವನ್ನು ಸಿಮೆಂಟ್ನಿಂದ ಮುಚ್ಚಿಟ್ಟ ಮುಸ್ಕಾನ್ ಹತ್ಯೆ ಕೇಸ್ಗಳಂತೆಯೇ ಈ ಪ್ರಕರಣ ಕೂಡ ಇಡೀ ದೇಶದ ಜನತೆಯನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ತನ್ನ ಕಾಮತೃಷೆಗೆ ಗಂಡನನ್ನು ಬರ್ಬರವಾಗಿ ಕೊಲೆಗೈದ ಪತ್ನಿಯ ಕರಾಳ ಮುಖ ಕಡೆಗೂ ದೆಹಲಿ ಪೊಲೀಸರ ತನಿಖೆಯಲ್ಲಿ ಬಟಾಬಯಲಾಗಿದೆ.

ಹೆಂಡತಿಯ ಕಾಮದಾಟಕ್ಕೆ ಬಲಿಯಾದ ವ್ಯಕ್ತಿಯನ್ನು ದೆಹಲಿಯ ಕರಣ್ ದೇವ್ ಎಂದು ಗುರುತಿಸಲಾಗಿದೆ. ಸುಶ್ಮಿತಾ ಮತ್ತು ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ರಾಹುಲ್ ಜೊತೆಗೂಡಿ ಅಮಾಯಕನ ಪ್ರಾಣ ತೆಗೆದಿರುವುದು ಪೊಲೀಸರ ವಿಚಾರಣೆಯಲ್ಲಿ ಸ್ಪಷ್ಟವಾಗಿದೆ. ಕರಣ್ನ ಸೋದರ ಸಂಬಂಧಿ ಜತೆಗೆ ದೈಹಿಕ ಸಂಬಂಧ ಇಟ್ಟುಕೊಂಡಿದ್ದ ಸುಶ್ಮಿತಾ, ಪತಿಯ ಇರುವಿಕೆಯೇ ತನ್ನ ಕಾಮದಾಟಕ್ಕೆ ಅಡ್ಡಿ ಎಂದು ಭಾವಿಸಿ, ಊಟದಲ್ಲಿ 15 ನಿದ್ದೆ ಮಾತ್ರಗಳನ್ನು ಬೆರೆಸಿ ಕೊಟ್ಟು, ವಿದ್ಯುತ್ ಶಾಕ್ನಿಂದ ಕೊಲೆಗೈದಿರುವುದು ಖಾಕಿ ತನಿಖೆ ಮೂಲಕ ಬೆಳಕಿಗೆ ಬಂದಿದೆ.

ಜು.13ರಂದು, ಊಟಕ್ಕೆ ಕುಳಿತ ಕರಣ್ ದೇವ್ಗೆ ಆಹಾರದಲ್ಲಿ 15 ನಿದ್ರೆ ಮಾತ್ರೆಗಳನ್ನು ಬೆರೆಸಿ ಕೊಟ್ಟ ಸುಶ್ಮಿತಾ, ಪತಿ ಊಟ ತಿಂದು ಮಲಗುವವರೆಗೂ ಕಾದು ಕುಳಿತಿದ್ದಳು. ಆದರೆ, ಆತ ಅಂದುಕೊಂಡಂತೆ ಸಾವಿಗೀಡಾಗಲಿಲ್ಲ. ಇದರಿಂದ ಗಾಬರಿಗೊಂಡ ಕಿರಾತಕಿ, ರಾಹುಲ್ಗೆ ಸಂದೇಶದ ಮೂಲಕ ಏನಾದರೂ ಸಲಹೆ ಕೊಡುವಂತೆ ಹೇಳಿದ್ದಳು. ತಡವಾಗಿ ನಿದ್ರೆಗೆ ಜಾರುತ್ತಿದ್ದ ಕರಣ್ಗೆ ವಿದ್ಯುತ್ ಶಾಕ್ ಕೊಟ್ಟು ಕಡೆಗೂ ಆತನ ಉಸಿರು ನಿಲ್ಲಿಸಿದ ಸುಶ್ಮಿತಾ, ಪ್ರಿಯಕರ ರಾಹುಲ್ ಜತೆಗೂಡಿ ಪತಿಯ ಸಾವನ್ನು ಖಚಿತಪಡಿಸಿಕೊಂಡಳು. ಇದಾದ ಬಳಿಕ ಗಂಡನ ಮನೆಯವರಿಗೆ ಫೋನ್ ಮಾಡಿ, ಕರಣ್ ಕರೆಂಟ್ ಶಾಕ್ನಿಂದ ಉಸಿರಾಡುತ್ತಿಲ್ಲ ಎಂದು ನಾಟಕವಾಡಿದಳು.

ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದ ಪೋಷಕರಿಗೆ ಮಗ ವಿದ್ಯುತ್ ಸ್ಪರ್ಶಕ್ಕೆ ತುತ್ತಾಗಿ ಸಾವಿಗೀಡಾಗಿದ್ದಾನೆ ಎಂಬ ಸುದ್ದಿ ಅತೀವ ದುಃಖ ತಂದೊಡ್ಡಿತು. ಈ ವೇಳೆ ಸೊಸೆಯ ಮೊಸಳೆ ಕಣ್ಣೀರಿನ ಮಾತುಗಳನ್ನು ನಂಬಿ ಇದು ಅಪಘಾತವೇ ಇರಬಹುದು ಎಂದು ಭಾವಿಸಿದ ಕರಣ್ ಕುಟುಂಬಸ್ಥರು ಮರಣೋತ್ತರ ಪರೀಕ್ಷೆ ಅಗತ್ಯವಿಲ್ಲ ಎಂದು ಸುಮ್ಮನಾದರು. ಆದರೆ, ಪ್ರಕರಣದ ಬಗ್ಗೆ ಶಂಕೆ ವ್ಯಕ್ತಪಡಿಸಿದ ಖಾಕಿ, ರಾಹುಲ್ ಮತ್ತು ಸುಶ್ಮಿತಾ ವರ್ತನೆಯಿಂದ ಅನುಮಾನ ದೃಡಪಡಿಸಿಕೊಂಡರು. ಕೂಡಲೇ ಕರಣ್ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡಿ ಎಂದು ಕುಟುಂಬಸ್ಥರನ್ನು ಒತ್ತಾಯಿಸಿದರು. ಅಂತೆಯೇ ಪರೀಕ್ಷೆ ಕೈಗೊಂಡ ಖಾಕಿಗೆ ತಮ್ಮ ಶಂಕೆ ದೃಢವಾಯಿತು.

ಕರಣ್ರ ಸಾವಿಗೆ ಆತನ ಸೋದರ ಸಂಬಂಧಿ ರಾಹುಲ್ ಮತ್ತು ಪತ್ನಿ ಸುಶ್ಮಿತಾ ಕಾರಣ ಎಂಬುದು ತನಿಖೆಯಲ್ಲಿ ತಿಳಿಯಿತು. ಇಬ್ಬರು ತಮ್ಮಿಂದಲೇ ಈ ಕೊಲೆಯಾಗಿದೆ ಎಂದು ತಪ್ಪೊಪ್ಪಿಕೊಂಡರು. ಈ ವೇಳೆ ಚುರುಕು ತನಿಖೆ ಕೈಗೊಂಡ ಪೊಲೀಸರಿಗೆ, ಸುಶ್ಮಿತಾ ಮತ್ತು ಪ್ರಿಯಕರನ ನಡೆದ ಇನ್‌ಸ್ಟಾಗ್ರಾಮ್ ಚಾಟಿಂಗ್ ರಹಸ್ಯ ಕೊಲೆ ಹಿಂದಿದ್ದ ಉದ್ದೇಶ ಮತ್ತು ಘಟನೆಯ ಇಂಚಿಂಚೂ ಮಾಹಿತಿ ಬಯಲಾಯಿತು. ಕೊಲೆಗೈಯುವ ಮುನ್ನ ಇವರಿಬ್ಬರೂ ಮಾಡಿರುವ ಮಾತುಕತೆಯೆ ಚಾಟಿಂಗ್ ಸದ್ಯ ಖಾಕಿಯನ್ನೇ ಅಚ್ಚರಿಗೆ ದೂಡಿದೆ.

ಕರಣ್ ದೇವ್ ಉಸಿರು ಚೆಲ್ಲುವ ಕೆಲವು ಗಂಟೆಗಳ ಮುನ್ನ ರಾಹುಲ್ ಮತ್ತು ಸುಶ್ಮಿತಾ ನಡುವೆ ನಡೆದ ಚಾಟಿಂಗ್ ಸಂಭಾಷಣೆ ಇದು! 15 ನಿದ್ದೆ ಮಾತ್ರೆಗಳನ್ನು ಕೊಟ್ಟು ಮೂರು ಗಂಟೆ ಕಳೆದರೂ ಮೃತಪಡದ ಪತಿಯ ಕುರಿತು ಸುಶ್ಮಿತಾ ಗಾಬರಿಗೊಂಡಿದ್ದಳು. ಈ ವೇಳೆ ಆಕೆ ರಾಹುಲ್ಗೆ ಮಾಡಿದ ಸಂದೇಶ ಈ ಕೆಳಕಂಡಂತಿದೆ.

ಸುಶ್ಮಿತಾ: ನಿದ್ರೆ ಮಾತ್ರೆಗಳನ್ನು ಸೇವಿಸಿದ ಬಳಿಕ ಪ್ರಾಣ ಹೋಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ನೋಡು. ಕರಣ್ ಊಟ ಮಾಡಿ ಮೂರು ಗಂಟೆಯಾಗಿದೆ. ಆದರೂ, ಆತ ವಾಂತಿ, ಭೇದಿ, ಒದ್ದಾಟ ಯಾವ ಲಕ್ಷಣವನ್ನು ತೋರುತ್ತಿಲ್ಲ. ಈಗ ಏನು ಮಾಡೋದು?ಏನಾದರೂ ಸಲಹೆ ಇದ್ಯಾ?

ರಾಹುಲ್: ನಿನಗೆ ಬೇರೆ ಏನೂ ತೋಚಲಿಲ್ಲ ಎಂದರೆ, ಅವನಿಗೆ ವಿದ್ಯುತ್ ಶಾಕ್ ಕೊಡು.

ಸುಶ್ಮಿತಾ: ಅವರಿಗೆ ಶಾಕ್ ಕೊಡಲು ನಾನೇಗೆ ಕಟ್ಟಿಹಾಕಬೇಕು? ಇದು ನನಗೆ ಗೊತ್ತಾಗುತ್ತಿಲ್ಲ.

ರಾಹುಲ್: ಟೇಪ್ ಬಳಸು.

ಸುಶ್ಮಿತಾ: ಅವರ ಉಸಿರು ತುಂಬಾ ನಿಧಾನವಾಗಿದೆ.

ರಾಹುಲ್: ನಿನ್ನ ಬಳಿಯಿರುವ ಎಲ್ಲಾ ಮಾತ್ರೆಗಳನ್ನು ನುಂಗಿಸು.

ಸುಶ್ಮಿತಾ: ಅವರ ಬಾಯಿ ತೆರೆಯಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನಾನು ನೀರು ಕುಡಿಸಬಲ್ಲೆ. ಆದರೆ, ಮಾತ್ರೆ ನುಂಗಿಸುವುದು ಕಷ್ಟ. ನೀನು ಇಲ್ಲಿಗೆ ಬಾ, ಬಹುಶಃ ನಾವಿಬ್ಬರು ಸೇರಿ ಹೆಚ್ಚಿನ ನಿದ್ರೆ ಮಾತ್ರೆಗಳನ್ನು ಕೊಡೋಣ.

ಸುಶ್ಮಿತಾ ಮತ್ತು ರಾಹುಲ್ ನಡುವೆ ನಡೆದ ಚಾಟಿಂಗ್, ಅವರಿಬ್ಬರು ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದೆ. ಇದನ್ನು ಬಲವಾದ ಸಾಕ್ಷಿಯಾಗಿ ಪರಿಗಣಿಸಿದ ಖಾಕಿ, ಸದ್ಯ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ,

Leave a Reply

Your email address will not be published. Required fields are marked *

Join WhatsApp Group
error: Content is protected !!